ಬೆಳಗಾವಿ: ಇಬ್ಬರು ಸಹೋದರರ ಮೇಲೆ 12 ಜನರು ಇರುವ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ನಡೆದಿದೆ. ಘಟನೆಯಿಂದ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕಿತ್ತೂರಿನ ಗುರುವಾರ ಪೇಟೆಯ ಸರ್ಕಾರಿ ಪ್ರಾಥಮಿಕ ಶಾಲೆ ಬಳಿ ಇರುವ ಡೈಮಂಡ್ ಚಿಕನ್ ಸೆಂಟರ್ ನಡೆಸುವ ಮುಜಮ್ಮಿಲ್ ಇನ್ನಾ ಜಮಾದಾರ್(33), ತೌಸೀಫ್ ಇನ್ನಾ ಜಮಾದಾರ್ (36) ಹಲ್ಲೆಗೊಳಗಾದವರು. ಮುಜಮ್ಮಿಲ್ ಸ್ಥಿತಿ ಗಂಭೀರವಾಗಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ನೇಸರಗಿಯ ಯಲ್ಲಪ್ಪ ಲಕ್ಕುಂಡಿ, ವಿನೋದ ಸೇರಿ 12 ಜನರ ತಂಡವು ಹಲ್ಲೆ ಮಾಡಿದೆ. ಹಣಕಾಸಿನ ವ್ಯವಹಾರವೇ ಈ ಘಟನೆಗೆ ಕಾರಣ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಕ್ರೂಸರ್ ವಾಹನದಲ್ಲಿ ಸುಮಾರು ಹತ್ತು, ಹನ್ನೆರಡು ಜನರ ಗುಂಪು ಇಂದು ಬೆಳಗ್ಗೆ ಚಿಕನ್ ಅಂಗಡಿಗೆ ಏಕಾಏಕಿ ನುಗ್ಗಿ, ಅಂಗಡಿಯಿಂದ ಒಬ್ಬನನ್ನು ಹೊರಗೆ ಎಳೆದು ತಂದು ಮಚ್ಚಿನಿಂದ ಹಲ್ಲೆ ಮಾಡಲಾಗಿದೆ. ಇದೇ ವೇಳೆ, ಮತ್ತೊಬ್ಬನ ಮೇಲೆಯೂ ದಾಳಿ ಮಾಡಲಾಗಿದೆ.
ಹಲ್ಲೆಗೊಳಗಾದ ಮುಜಮ್ಮಿಲ್ ತಂದೆ ಇನ್ನಾ ಜಮಾದಾರ ಈ ಕುರಿತು ಮಾಹಿತಿ ನೀಡಿದ್ದು, ಯಲ್ಲಪ್ಪ ಲಕ್ಕುಂಡಿ ಸೇರಿ 12 ಜನರು ನಮ್ಮ ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾರೆ. ಅವರಿಗೆ ಕೊಡಬೇಕಾದ ಹಣ ಮರಳಿಸಿದ್ದೇವೆ. ಅಲ್ಲದೇ ಬಡ್ಡಿಯನ್ನು ಕೊಟ್ಟಿದ್ದೇವೆ. ಆದರೂ ಇನ್ನೂ ಕೊಡಬೇಕೆಂದು ದಾಳಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಹಾಡಹಗಲೇ ಮಚ್ಚು, ಲಾಂಗುಗಳಿಂದ ಹಲ್ಲೆ ಮಾಡಿರುವ ಘಟನೆಯಿಂದ ಕಿತ್ತೂರು ಪಟ್ಟಣದ ಜನ ಬೆಚ್ಚಿ ಬಿದ್ದಿದ್ದಾರೆ. ಕೈಯಲ್ಲಿದ್ದ ಮಾರಕಾಸ್ತ್ರಗಳನ್ನು ನೋಡಿ ಭೀತಿಗೊಂಡ ಜನರು ಅವರ ಬಳಿ ಹೋಗಲು ಭಯ ಪಟ್ಟಿದ್ದಾರೆ. ಹಲ್ಲೆ ಮಾಡಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂಓದಿ:ಗಲ್ಲಿ ಕ್ರಿಕೆಟ್ ಗಲಾಟೆ: ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹೇಳಿದ್ದೇನು? - Belagavi Police Commissioner