ಬೆಳಗಾವಿ: ಮತ್ತೆ ಬೆಳಗಾವಿ ಚಳಿಗಾಲ ಅಧಿವೇಶನ ಬರುತ್ತಿದೆ. ಜನಪ್ರತಿನಿಧಿಗಳು ಬಂದ ಪುಟ್ಟ, ಹೋದ ಪುಟ್ಟ ಎಂಬಂತೆ ಹುಸಿ ಭರವಸೆಗಳೊಂದಿಗೆ ವಾಪಸಾಗುವುದು ಹಿಂದೆಲ್ಲಾ ನಡೆದೇ ಇದೆ. ಈವರೆಗೂ ಬೆಳಗಾವಿಯಲ್ಲಿ ನಡೆದ 12 ಅಧಿವೇಶನಗಳಲ್ಲಿ ಹೇಳಿಕೊಳ್ಳುವ ಯಾವೊಂದು ಬೇಡಿಕೆಯೂ ಈಡೇರಿಲ್ಲ ಎಂಬುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಬೇಕು, ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಧ್ವನಿಯಾಗಬೇಕು ಎಂಬ ಉದ್ದೇಶದಿಂದ ಬೆಳಗಾವಿಯಲ್ಲಿ 500 ಕೋಟಿ ರೂ. ಖರ್ಚು ಮಾಡಿ 2012ರಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಲಾಗಿದೆ. ವರ್ಷಕ್ಕೊಂದು ಬಾರಿ 10 ದಿನಗಳ ಕಾಲ 10 ಕೋಟಿಗೂ ಅಧಿಕ ಹಣ ಖರ್ಚು ಮಾಡಿ ಚಳಿಗಾಲ ಅಧಿವೇಶನ ನಡೆಸಲಾಗುತ್ತಿದೆ. ಆದರೆ, ಸೌಧ ನಿರ್ಮಾಣದ ಆಶಯ ಮಾತ್ರ ಈಡೇರದೇ ಇರುವುದು ದುರಂತ.
ಬೆಳಗಾವಿ ಅಧಿವೇಶನವನ್ನು ಎಲ್ಲಾ ಪಕ್ಷಗಳ ಚುನಾಯಿತ ಪ್ರತಿನಿಧಿಗಳೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಎರಡು ವಾರ ಪ್ರವಾಸಕ್ಕೆ ಬಂದಂತೆ ಬರುತ್ತಾರೆ. ಗೋವಾ ಪ್ರವಾಸ, ಕೊಲ್ಹಾಪುರ ಮಹಾಲಕ್ಷ್ಮೀ ದೇವಿ, ಸವದತ್ತಿ ಯಲ್ಲಮ್ಮದೇವಿ ದರ್ಶನ ಹಾಗೂ ಈ ಭಾಗದ ತಮ್ಮ ಶಾಸಕ ಮಿತ್ರರ ಮನೆಗಳಿಗೆ ಭೇಟಿ ನೀಡುತ್ತ ಕಾಟಾಚಾರಕ್ಕೆ ಅಧಿವೇಶನಕ್ಕೆ ಬರುತ್ತಾರೆ ಎಂಬ ಆರೋಪ ಸರ್ವೇ ಸಾಮಾನ್ಯವಾಗಿದೆ.
ಅಧಿವೇಶನದಲ್ಲಿ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಿ ಸುವರ್ಣಸೌಧಕ್ಕೆ ಶಕ್ತಿ ತುಂಬುವ ಬಗ್ಗೆ ಯಾರೂ ತುಟಿ ಪಿಟಿಕ್ ಎನ್ನುವುದಿಲ್ಲ. ಈ ಭಾಗದಲ್ಲಿ ದೊಡ್ಡ ಕೈಗಾರಿಕೆಗಳನ್ನು ಆರಂಭಿಸುವ, ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಬಗ್ಗೆಯೂ ಚಕಾರ ಎತ್ತುವುದಿಲ್ಲ. ಸಾಂದರ್ಭಿಕ ರಾಜಕೀಯ ವಿದ್ಯಮಾನಗಳ ಕುರಿತು ಸದನದಲ್ಲಿ ಆಡಳಿತ-ಪ್ರತಿಪಕ್ಷಗಳು ವಾಗ್ಯುದ್ಧ ಮಾಡಿ, ಸಮಯ ಹಾಳು ಮಾಡುವುದೇ ರೂಢಿಯಾಗಿದೆ ಎಂಬುದು ಜನರ ದೂರು.
ಪ್ರತಿಭಟನೆಗೆ ಸೀಮಿತವಾದ ಅಧಿವೇಶನ: ಬೆಳಗಾವಿ ಅಧಿವೇಶನ ಎಂದರೆ ಒಂದು ರೀತಿ ಪ್ರತಿಭಟನೆಗಳ ಅಧಿವೇಶನವಾಗಿ ಬಿಟ್ಟಿದೆ. ವಿವಿಧ ಸಂಘಟನೆಗಳಿಂದ ಸಾಲು ಸಾಲು ಪ್ರತಿಭಟನೆಗಳು ನಡೆಯುತ್ತವೆ. ಪ್ರತಿಭಟನಾಕಾರರ ಮನವಿ ಸ್ವೀಕರಿಸುವ ನೆಪದಲ್ಲಿ ಸಂಬಂಧಿಸಿದ ಇಲಾಖೆ ಸಚಿವರು ಸದನಕ್ಕೆ ಚಕ್ಕರ್ ಹಾಕುತ್ತಾರೆ. ಅಲ್ಲದೇ ಅರ್ಧಕ್ಕಿಂತ ಕಡಿಮೆ ಸದಸ್ಯರು ಕಲಾಪದಲ್ಲಿ ಭಾಗಿಯಾಗುತ್ತಾರೆ. ಬೆಳಗ್ಗೆ ಬಂದು ಹಾಜರಿ ಪುಸ್ತಕಕ್ಕೆ ಸಹಿ ಮಾಡಿ ಅದೆಲ್ಲಿಗೆ ಹೋಗುತ್ತಾರೋ, ಆ ದೇವರಿಗೆ ಗೊತ್ತು ಎನ್ನುತ್ತಾರೆ ಸಾರ್ವಜನಿಕರು.
ಅಧಿವೇಶನದಲ್ಲಿ ಏನಾಗಬೇಕು?:
- ಬೆಳಗಾವಿ ಅಧಿವೇಶನದಲ್ಲಿ ಉ.ಕ. ಅಭಿವೃದ್ಧಿ ಬಗ್ಗೆ ಮಾತ್ರ ಚರ್ಚೆ ಆಗಬೇಕು.
- ಬೆಳಗಾವಿಯಲ್ಲಿ ಈ ಬಾರಿ 9 ದಿನಗಳಿಗೆ ನಿಗದಿಯಾಗಿರುವ ಅಧಿವೇಶನ ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದ ಮೇಲೆ ಮತ್ತೆ 10 ದಿನಗಳ ಅವಧಿಗೆ ವಿಸ್ತರಣೆ ಆಗಬೇಕು.
- ಶೇ.100ರಷ್ಟು ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ಹಾಜರಾತಿ ಇರಬೇಕು.(ತುರ್ತು ಆರೋಗ್ಯ ಸಮಸ್ಯೆ ಹೊರತುಪಡಿಸಿ)
- ಕಲಾಪದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪ ವಿಚಾರದಲ್ಲಿ ಸದನದ ಬಾವಿಗಿಳಿದು ಧರಣಿ ಮಾಡಿ, ಸಮಯ ವ್ಯರ್ಥಗೊಳಿಸುವುದಕ್ಕೆ ವಿಧಾನಸಭೆ ಅಧ್ಯಕ್ಷರು ಮತ್ತು ಸಭಾಪತಿಗಳು ಇತಿಶ್ರೀ ಹಾಡಬೇಕು.
- ಅಧಿವೇಶನದ ಅವಧಿಯಲ್ಲಿ ಶನಿವಾರ, ಭಾನುವಾರ ಸಿಎಂ, ಡಿಸಿಎಂ, ಸಚಿವರು ತಮ್ಮೂರಿಗೆ ತೆರಳದೇ ಈ ಭಾಗದ ಹಳ್ಳಿಗಳತ್ತ ಮುಖ ಮಾಡಲಿ. ಅಲ್ಲಿನ ಜನರ ಸಮಸ್ಯೆ ಆಲಿಸುವ ಪ್ರಯತ್ನ ಆಗಲಿ.
- ರಾಜ್ಯಮಟ್ಟದ ಪ್ರಮುಖ ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರಿಸುವ ಗಟ್ಟಿ ನಿರ್ಧಾರ ಕೈಗೊಳ್ಳಲಿ.
- ಹೆಸರಿಗಷ್ಟೇ ಬೆಳಗಾವಿ 2ನೇ ರಾಜಧಾನಿ ಆಗದೇ, ಅಧಿಕೃತವಾಗಿ ಬೆಳಗಾವಿ ಕರ್ನಾಟಕದ ರಾಜಧಾನಿ ಎಂದು ಘೋಷಿಸಲಿ.
- ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ, ಕಳಸಾ ಬಂಡೂರಿ, ಉ.ಕ. ಏತ ನೀರಾವರಿ ಯೋಜನೆಗಳು, ಕೆರೆ ತುಂಬಿಸುವುದು ಸೇರಿ ಮತ್ತಿತರ ಕಾಮಗಾರಿಗಳಿಗೆ ವಿಶೇಷ ಅನುದಾನ ಒದಗಿಸಬೇಕು.
- ಬೆಂಗಳೂರಿಗೆ ಪರ್ಯಾಯವಾಗಿ ಬೆಳಗಾವಿ ಬೆಳೆಸಲು ಆಡಳಿತ-ವಿಪಕ್ಷಗಳು ಒಟ್ಟಾಗಿ ಇಚ್ಛಾಶಕ್ತಿ ಪ್ರದರ್ಶಿಸಲಿ. ಐಟಿ-ಬಿಟಿ ಕಂಪನಿಗಳು, ಬೃಹತ್ ಕೈಗಾರಿಕೆಗಳನ್ನು ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶುರು ಮಾಡಬೇಕಿದೆ.
ಈಟಿವಿ ಭಾರತ ಜೊತೆಗೆ ಹಿರಿಯ ಪತ್ರಕರ್ತ ರಾಮಚಂದ್ರ ಸುಣಗಾರ ಮಾತನಾಡಿ, "ಕಳೆದ ಸಾಲಿನ ಚಳಿಗಾಲ ಅಧಿವೇಶನದಲ್ಲಿ ಉ.ಕ. ಬಗ್ಗೆ ಕೇವಲ 10 ಗಂಟೆ 35 ನಿಮಿಷ ಮಾತ್ರ ಚರ್ಚೆ ಆಗಿರೋದು ದುರದೃಷ್ಟಕರ. ಈ ಭಾಗದ ಬಗ್ಗೆ ಜನಪ್ರತಿನಿಧಿಗಳ ಕಾಳಜಿ ಎಷ್ಟಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಕನಿಷ್ಟ 5 ದಿನವಾದರೂ ಉ.ಕ. ಸಮಸ್ಯೆಗಳ ಕುರಿತು ಚರ್ಚಿಸಬೇಕು. ಇಲ್ಲಿನ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು" ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಬೆಳಗಾವಿ ಅಧಿವೇಶನ ಭದ್ರತೆಗೆ 6 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ: ಎಡಿಜಿಪಿ ಹಿತೇಂದ್ರ