ಬೆಳಗಾವಿ: ನಾಳೆ ನಡೆಯಲಿರುವ ಕೆಎಲ್‍ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆ್ಯಂಡ್ ರಿಸರ್ಚ್ (ಕಾಹೆರ)ನ 14ನೇ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಕೆಎಲ್‍ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ತಿಳಿಸಿದ್ದಾರೆ.
ಡಾ. ರಿಚರ್ಡ್ ಜಾಕೋಬ್ ಡೆರ್ಮನ್ಗೆ ಗೌರವ ಡಾಕ್ಟರೇಟ್ ಪದವಿ: ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಮವಾರ ಬೆಳಗ್ಗೆ 11 ಗಂಟೆಗೆ ಜೆಎನ್‍ಎಂಸಿ ಆವರಣದಲ್ಲಿರುವ ಕೆಎಲ್‍ಇ ಸೆಂಟಿನರಿ ಕನ್ವೇನ್ಷನ್ ಸೆಂಟರ್ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್ ಆಗಮಿಸುತ್ತಾರೆ. ಘಟಿಕೋತ್ಸವದಲ್ಲಿ ಇದೇ ಮೊದಲ ಬಾರಿಗೆ ವಿಶ್ವವಿದ್ಯಾಲಯವು ಯುಎಸ್‍ಎ ಫಿಲ್ಡೇಲ್ಫಿಯಾದ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದ ವೈಸ್ ಪ್ರೊವೊಸ್ಟ್ ಡಾ.ರಿಚರ್ಡ್ ಜಾಕೋಬ್ ಡೆರ್ಮನ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಘಟಿಕೋತ್ಸವದಲ್ಲಿ ಒಟ್ಟು 1739 ವೈದ್ಯಕೀಯ ವಿವಿಧ ಕೋರ್ಸುಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಅದರಲ್ಲಿ 45 ಚಿನ್ನದ ಪದಕ ವಿಜೇತರಿದ್ದು, 30 ಪಿಹೆಚ್ ಡಿ ಪದವೀಧರರು, 13 ಪೋಸ್ಟ್ ಡಾಕ್ಟರಲ್(ಡಿಎಮ್/ಎಂಸಿಹೆಚ್), 644 ಪೋಸ್ಟ್ ಡಾಕ್ಟರೇಟ್ಸ್, 1023 ಅಂಡರ್ ಗ್ರ್ಯಾಜುಯೇಟ್ಸ್, ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೋಮಾ, 4 ಡಿಪ್ಲೋಮಾ, 5 ಫೆಲೋಶಿಫ್, 11 ಸರ್ಟಿಫಿಕೆಟ್ ಕೋರ್ಸ್ ವಿದ್ಯಾರ್ಥಿಗಳು ಘಟಿಕೋತ್ಸವದಲ್ಲಿ ಪಾಲ್ಗೊಂಡು ಪದವಿ ಪಡೆಯಲಿದ್ದಾರೆ ಎಂದು ಡಾ ಪ್ರಭಾಕರ್ ಕೋರೆ ಮಾಹಿತಿ ನೀಡಿದರು.
ಈ ವೇಳೆ ಕಾಹೆರ ಉಪಕುಲಪತಿ ಡಾ.ನೀತಿನ್ ಗಂಗಾನೆ, ಕುಲಸಚಿವ ಡಾ ಎಂ.ಎಸ್. ಗಣಾಚಾರಿ, ಡಾ. ತೇಜಸ್ವಿ ಪ್ರಧಾನ, ಜೆಎನ್‍ಎಂಸಿ ಪ್ರಾಚಾರ್ಯ ಡಾ.ಎನ್‍ಎಸ್ ಮಹಾಂತಶೆಟ್ಟಿ, ಡಾ.ರಾಜೇಶ ಪವಾರ, ಡಾ.ವಿಶ್ವನಾಥ ಪಟ್ಟಣಶೆಟ್ಟಿ ಹಾಜರಿದ್ದರು.