ಬೆಳಗಾವಿ: ಚಾಕ್ಲೇಟ್ ಗ್ಯಾಂಗ್ ನಂತರ ಬೆಳಗಾವಿಯಲ್ಲಿ ಜ್ಯೂಸ್ ಗ್ಯಾಂಗ್ ಆಕ್ಟಿವ್ ಆಗಿದೆ. ಜ್ಯೂಸ್ ಹಾಗೂ ಬಾಳೆಹಣ್ಣು ಕೊಟ್ಟು ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿಯೇ ನಗನಾಣ್ಯ, ಬಂಗಾರದ ಚೈನ್ ಅನ್ನು ದರೋಡೆ ಮಾಡಿರುವ ಘಟನೆ ಕುಂದಾನಗರಿ ಜನರನ್ನು ಬೆಚ್ಚಿಬೀಳಿಸಿದೆ.
ಕಳೆದ ಕೆಲ ತಿಂಗಳ ಹಿಂದೆ ರೈಲಿನಲ್ಲಿ ಮತ್ತು ಬರುವ ಚಾಕಲೇಟ್ ನೀಡಿ ನಗನಾಣ್ಯವನ್ನು ಗ್ಯಾಂಗ್ವೊಂದು ದೋಚಿತ್ತು. ಈಗ ಕೆಎಸ್ಆರ್ಟಿಸಿ ಬಸ್ನಲ್ಲಿ ಗ್ಯಾಂಗ್ವೊಂದು ದರೋಡೆ ಮಾಡಿದೆ. ಸಂಜೀವ್ ಖೋತ (40) ಹಾಗೂ ಮತ್ತೋರ್ವ ಪ್ರಯಾಣಿಕರ ಬಳಿ ಇದ್ದ ನಗನಾಣ್ಯ, ಬಂಗಾರದ ಚೈನ್ ಎಗರಿಸಲಾಗಿದೆ. ಜ್ಯೂಸ್ನಲ್ಲಿ ಮತ್ತು ಬರುವ ಪದಾರ್ಥ ಮಿಕ್ಸ್ ಮಾಡಿ ಪ್ರಜ್ಞೆ ತಪ್ಪಿಸಿ ಈ ಕೃತ್ಯ ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಹುಬ್ಬಳ್ಳಿಯಿಂದ ಬೆಳಗಾವಿಗೆ ಬರುತ್ತಿದ್ದ ಬಸ್ನಲ್ಲಿ ಈ ಘಟನೆ ನಡೆದಿದ್ದು, ಸದ್ಯ ಅಸ್ವಸ್ಥರಾಗಿರುವ ಸಂಜೀವ್ ಅವರನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಂಪೂರ್ಣ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಮತ್ತು ಬರುವ ಪದಾರ್ಥ ನೀಡಿ ಬಂಗಾರದ ಚೈನ್, ಬ್ಯಾಗ್, ಪರ್ಸ್ ಕದ್ದು ಖತರ್ನಾಕ್ ಕಳ್ಳರು ಪರಾರಿಯಾಗಿದ್ದಾರೆ. ಒಬ್ಬ ಅನಾಮಿಕನಿಂದ ಇಬ್ಬರ ಪ್ರಜ್ಞೆ ತಪ್ಪಿಸಿ ಕೃತ್ಯ ಎಸಗಲಾಗಿದೆ.
ಸಂಜೀವ್ ಸ್ನೇಹಿತ ಸುರೇಶ ಉಪಾಸೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನಿನ್ನೆ ಸಂಜೆ 7.30ರ ಸುಮಾರಿಗೆ ಹುಬ್ಬಳ್ಳಿಯಿಂದ ಬೆಳಗಾವಿಗೆ ಬಸ್ನಲ್ಲಿ ಬರುವಾಗ ಯಾರೋ ಒಬ್ಬರು ಬಾಳೆ ಹಣ್ಣು, ಜ್ಯೂಸ್ ಕೊಟ್ಟಿದ್ದಾರೆ. ಇವರು ಅದನ್ನು ಕುಡಿದು ಕೆಲವೇ ನಿಮಿಷಗಳಲ್ಲಿ ಪ್ರಜ್ಞೆ ತಪ್ಪಿದ್ದಾರೆ. ಬಳಿಕ ಕೊರಳಲ್ಲಿದ್ದ ಚಿನ್ನದ ಚೈನ್, ಕಿಸೆಯಲ್ಲಿದ್ದ ಹಣ ದೋಚಿದ್ದಾರೆ. ಇಬ್ಬರಿಗೆ ಈ ರೀತಿ ಮಾಡಿದ್ದಾರೆ. ನಮ್ಮ ಸ್ನೇಹಿತ ಸಂಜೀವ ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಬ್ಬ ವ್ಯಕ್ತಿ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಕೆಎಲ್ಇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ದೂರು ದಾಖಲಿಸುತ್ತೇವೆ ಎಂದು ಹೇಳಿದರು.