ಬೆಳಗಾವಿ: ಈ ಬಾರಿ ಕರ್ನಾಟಕ ರಾಜ್ಯೋತ್ಸವ ಮತ್ತು ದೀಪಾವಳಿ ಎರಡೂ ಒಂದೇ ದಿನ ಬಂದಿದ್ದು, ಬೆಳಗಾವಿ ಗಡಿಯಲ್ಲಿ ಕನ್ನಡದ ದೀಪ ಹಚ್ಚಲು ಲಕ್ಷ ಲಕ್ಷ ಕನ್ನಡಿಗರು ತುದಿಗಾಲಲ್ಲಿ ನಿಂತಿದ್ದಾರೆ. ಕುಂದಾನಗರಿ ತುಂಬಾ ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ಇಡೀ ನಗರ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ಕನ್ನಡದ ಹಬ್ಬವನ್ನು ಕಣ್ತುಂಬಿಕೊಳ್ಳಲು ಬೇರೆ ಬೇರೆ ಊರುಗಳಿಂದ ಜನರು ಬೆಳಗಾವಿಗೆ ಲಗ್ಗೆ ಇಡಲಿದ್ದಾರೆ. ಇಂದು ಮಧ್ಯರಾತ್ರಿ 12 ಗಂಟೆಯಿಂದಲೇ ಸಂಭ್ರಮ ಆರಂಭವಾಗಲಿದೆ. ಈ ಬಾರಿ ರಾಜ್ಯೋತ್ಸವ ಮತ್ತು ಬೆಳಕಿನ ಹಬ್ಬ ಒಂದೇ ದಿನ ಬಂದಿದ್ದರಿಂದ ಸಂಭ್ರಮ ಇಮ್ಮಡಿಗೊಂಡಿದೆ.
ಬೆಳಗಾವಿಯ ಶಕ್ತಿ ಕೇಂದ್ರ ರಾಣಿ ಚನ್ನಮ್ಮ ವೃತ್ತವು ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಚನ್ನಮ್ಮ ವೃತ್ತದ ನಾಲ್ಕು ದ್ವಾರಗಳಲ್ಲಿ ಕೆಂಪು-ಹಳದಿ ಧ್ವಜಗಳ ಸ್ವಾಗತ ಕಮಾನು ಅಳವಡಿಸಲಾಗಿದೆ. ಸುತ್ತಲೂ ಕನ್ನಡ ಸಂಘಟನೆಗಳು, ಜನಪ್ರತಿನಿಧಿಗಳ ಸ್ವಾಗತ ಕೋರುವ ಫ್ಲೆಕ್ಸ್ಗಳು ಗಮನ ಸೆಳೆಯುತ್ತಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳು ಜನರನ್ನು ಆಕರ್ಷಿಸುತ್ತಿವೆ. ದೀಪಾಲಂಕಾರ ಮಾಡಲಾಗಿದ್ದು, ಚನ್ನಮ್ಮ ಪುತ್ಥಳಿ ಸ್ವಚ್ಛಗೊಳಿಸಿ, ಹೊಸದಾಗಿ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ.
ಟೀಶರ್ಟ್, ಕನ್ನಡ ಬಾವುಟ ಮಾರಾಟ ಜೋರು: ಬೆಳಗಾವಿ ಗಲ್ಲಿ ಗಲ್ಲಿಯಲ್ಲಿ ಕನ್ನಡ ಬಾವುಟ, ಶಲ್ಲೆಗಳ ಮಾರಾಟ ಜೋರಾಗಿದೆ. ಕನ್ನಡಾಭಿಮಾನಿಗಳು ಬಾವುಟ ಖರೀದಿಸುವಲ್ಲಿ ನಿರತರಾಗಿದ್ದಾರೆ. ಇನ್ನು ಬ್ರಿಟಿಷರಿಗೆ ಕೊಡಲಿಲ್ಲಾ ಕಪ್ಪ, ಬೆಳಗಾವಿ ಕೇಳಿ ಮಾಡಬ್ಯಾಡ್ರಿ ತಪ್ಪ..! ಎಂಬ ಬರಹದ ರಾಣಿ ಚನ್ನಮ್ಮ ಭಾವಚಿತ್ರದ ಟೀಶರ್ಟ್ಗಳು ಗ್ರಾಹಕರನ್ನು ಸೆಳೆಯುತ್ತಿವೆ. ಜನರು ಕುಳಿತುಕೊಂಡು ಮೆರವಣಿಗೆ ವೀಕ್ಷಿಸಲು ಗ್ಯಾಲರಿ ಅಳವಡಿಸಲಾಗಿದೆ.
ರಾತ್ರಿ 12ಕ್ಕೆ ಸಂಭ್ರಮ ಶುರು: ಇಂದು ರಾತ್ರಿ 12 ಗಂಟೆ ಆಗುತ್ತಿದ್ದಂತೆ ಚನ್ನಮ್ಮ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ಜಮಾಯಿಸಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಿದ್ದಾರೆ. ಕನ್ನಡ ಬಾವುಟಗಳನ್ನು ಹಾರಾಡಿಸುತ್ತಾ, ಜೈಕಾರ ಕೂಗುತ್ತಾ, ಕುಣಿದು ಕುಪ್ಪಳಿಸಲಿದ್ದಾರೆ. ಬಳಿಕ ಬೆಳಗ್ಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಭವ್ಯ ಮೆರವಣಿಗೆ ಶುರುವಾಗಲಿದೆ. ಈ ವೇಳೆ ನೂರಾರು ರೂಪಕಗಳು, ಮಹಾಪುರುಷ ವೇಷಧಾರಿ ಮಕ್ಕಳು ಮೆರವಣಿಗೆಗೆ ಮೆರಗು ತಂದು ಕೊಡಲಿದ್ದಾರೆ. ಕಿವಿಗಡಚಿಕ್ಕುವ ಕನ್ನಡ ಡಿಜೆ ಹಾಡುಗಳಿಗೆ ಲಕ್ಷಾಂತರ ಜನರು ಹುಚ್ಚೆದ್ದು ಕುಣಿಯಲಿದ್ದಾರೆ.
ಇದನ್ನೂ ಓದಿ: ವರ್ಷದಲ್ಲಿ ಒಂದು ದಿನ ಭಕ್ತರಿಗೆ ದರ್ಶನ ನೀಡುವ ಕಾಫಿನಾಡಿನ ದೇವಿರಮ್ಮ: ಬೆಟ್ಟಕ್ಕೆ ಹರಿದು ಬಂದ ಸಾವಿರಾರು ಜನ