ಬೆಳಗಾವಿ: ಲೋಕಸಭೆ ಚುನಾವಣೆ ಅಖಾಡ ರಂಗೇರುತ್ತಿರುವ ನಡುವೆ ಪ್ರಧಾನಿ ಮೋದಿ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಬಿಜೆಪಿ ಪಾಳೇಯದಲ್ಲಿ ಬಿರುಸಿನ ಚಟುವಟಿಕೆ ಗರಿಗೆದರಿದ್ದು, ಕಾರ್ಯಕರ್ತರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಇಂದು ರಾತ್ರಿಯೇ ನಗರದ ಖಾಸಗಿ ಹೋಟೆಲ್ನಲ್ಲಿ ತಂಗುವ ಮೂಲಕ ಹೊಸ ಇತಿಹಾಸವನ್ನು ನಮೋ ಬರೆಯಲಿದ್ದಾರೆ. ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಲಿದ್ದಾರೆ. ಅಲ್ಲದೇ ನಾಳೆ ನಡೆಯುವ ಚುನಾವಣೆ ಪ್ರಚಾರದಲ್ಲಿ ಯಾವ ರೀತಿ ಮೋದಿ ಮೋಡಿ ಮಾಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಬೆಳಗಾವಿ ಲೋಕಸಭೆ ಅಭ್ಯರ್ಥಿ ಜಗದೀಶ ಶೆಟ್ಟರ್, ಚಿಕ್ಕೋಡಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಪ್ರಚಾರಕ್ಕೆ ನಮೋ ಎಂಟ್ರಿ ಕೊಡುತ್ತಿದ್ದಾರೆ. ಬೆಳಗಾವಿ ನಗರದ ಯಡಿಯೂರಪ್ಪ ಮಾರ್ಗದಲ್ಲಿನ ಮಾಲಿನಿ ಸಿಟಿ ಮೈದಾನದಲ್ಲಿ ನಾಳೆ ಬೆಳಗ್ಗೆ 10 ಗಂಟೆಗೆ ಎರಡೂ ಕ್ಷೇತ್ರದ ಮತದಾರರನ್ನು ಉದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ. 70 ಸಾವಿರ ಆಸನಗಳನ್ನು ಹಾಕಲಾಗಿದ್ದು, ಎರಡೂ ಕ್ಷೇತ್ರಗಳ 2 ಲಕ್ಷಕ್ಕೂ ಅಧಿಕ ಜನ ಮೋದಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿ ಘಟಾನುಘಟಿ ನಾಯಕರು ಉಪಸ್ಥಿತರಲಿದ್ದಾರೆ. ಇನ್ನು ಕಾರ್ಯಕ್ರಮ ನಡೆಯುವ ಮಾಲಿನಿ ಸಿಟಿ ಸೇರಿ ಇಡೀ ಬೆಳಗಾವಿ ನಗರದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
2 ಲಕ್ಷ ಜನ ಸೇರುವ ನಿರೀಕ್ಷೆ: ಮಾಜಿ ಶಾಸಕ ಸಂಜಯ ಪಾಟೀಲ ಮಾಧ್ಯಮಗಳೊಂದಿಗೆ ಮಾತನಾಡಿ, ಇಡೀ ಬೆಳಗಾವಿಗೆ ಇದೊಂದು ದೊಡ್ಡ ಹಬ್ಬ. ಬೆಳಗಾವಿಗೆ ಅನೇಕ ಪ್ರಧಾನಮಂತ್ರಿಗಳು ಬಂದು ಹೋಗಿದ್ದಾರೆ. ಆದರೆ, ಇಲ್ಲೆ ವಾಸ್ತವ್ಯ ಹೂಡುತ್ತಿರುವುದು ಇದೇ ಮೊದಲು ಮತ್ತು ಹೆಮ್ಮೆಯ ಸಂಗತಿ. 2 ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಜನರಿಗೆ ಆಸನ, ಕುಡಿಯುವ ನೀರು ಸೇರಿ ಎಲ್ಲ ರೀತಿ ವ್ಯವಸ್ಥೆ ಮಾಡಿದ್ದೇವೆ. ಮೋದಿ ನೋಡಲು ಮತ್ತು ಅವರ ಮಾತು ಕೇಳಲು ಜನರು ಸ್ವಯಂ ಸ್ಪೂರ್ತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರಲಿದ್ದಾರೆ. ಉತ್ತರ ಕರ್ನಾಟಕದ 14 ಕ್ಷೇತ್ರಗಳ ಮೇಲೆಯೂ ಮೋದಿ ಕಾರ್ಯಕ್ರಮ ಪರಿಣಾಮ ಬೀರಲಿದೆ ಎಂದು ಹೇಳಿದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷೆ ಡಾ. ನಯನಾ ಭಸ್ಮೆ ಮಾತನಾಡಿ, 28ರಂದು ಮೋದಿ ಅವರ ಆಗಮನದಿಂದ ದೊಡ್ಡ ಇತಿಹಾಸ ನಿರ್ಮಾಣ ಆಗಲಿದೆ. ಜನಸಾಗರವೇ ನಾಳೆ ಮಾಲಿನಿ ಸಿಟಿಯತ್ತ ಹರಿದು ಬರಲಿದೆ. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಲಿದ್ದಾರೆ. ಮೋದಿ ಅವರು ಬಂದು ಹೋಗುವುದರಿಂದ ಅಭ್ಯರ್ಥಿಗಳಿಗೆ ದೊಡ್ಡ ಶಕ್ತಿ ಬರುವುದು ನಿಶ್ಚಿತ. ಮೋದಿಯವರ ಪಾದಸ್ಪರ್ಶದಿಂದ ಬೆಳಗಾವಿ ಸ್ವರ್ಗವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇಂದು ರಾತ್ರಿ 8:50 ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿಲಿರುವ ನಮೋ ಕಾಕತಿ ಬಳಿ ಇರುವ ಜೊಲ್ಲೆ ಒಡೆತನದ ವೆಲ್ ಕಮ್ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈಗಾಗಲೇ ಎಸ್ ಪಿಜಿ ಅವರು ವೆಲ್ ಕಮ್ ಹೋಟೆಲ್ನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದು, ಬೆಳಗಾವಿ ನಗರ ಪೋಲಿಸರಿಂದಲೂ ಹೋಟೆಲ್ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಒಟ್ಟಾರೆ ಕುಂದಾನಗರಿಯಲ್ಲಿ ಮೋದಿ ಯಾವ ರೀತಿ ಕಮಾಲ್ ಮಾಡುತ್ತಾರೆ ಎಂಬುದಕ್ಕೆ ಜೂನ್ 4ರವರೆಗೆ ಕಾಯಬೇಕಿದೆ.
ರಸ್ತೆಗಳ ಮಾರ್ಗ ಬದಲಾವಣೆ: ಮೋದಿ ಆಗಮನ ಹಿನ್ನೆಲೆಯಲ್ಲಿ ರಸ್ತೆ ಮಾರ್ಗ ಬದಲಾವಣೆ ಮಾಡಿ ನಗರ ಪೋಲಿಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಆದೇಶ ಹೊರಡಿಸಿದ್ದಾರೆ. ಭದ್ರತೆಯಲ್ಲಿ ಲೋಪ ಆಗದಂತೆ ಪ್ರಮುಖ ರಸ್ತೆಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ. ವಿವಿಧ ಜಿಲ್ಲೆ ಹಾಗೂ ತಾಲೂಕಿನಿಂದ ಬರುವ ವಾಹನಗಳು ಪರ್ಯಾಯ ಮಾರ್ಗ ಬಳಸುವಂತೆ ಸೂಚಿಸಲಾಗಿದೆ.
ಕೊಲ್ಹಾಪುರ, ನಿಪ್ಪಾಣಿ ಕಡೆಗಳಿಂದ ಬೆಳಗಾವಿಗೆ ಬರುವ ಎಲ್ಲ ವಾಹನಗಳು ಸಂಕೇಶ್ವರದಿಂದ ಹುಕ್ಕೇರಿ ಮಾರ್ಗ ಬಳಸಿಕೊಳ್ಳಬೇಕು. ಎಮ್.ಕೆ.ಹುಬ್ಬಳ್ಳಿ, ಧಾರವಾಡ ಕಡೆಯಿಂದ ಬರುವ ವಾಹನಗಳು ನೇಗಿನಹಾಳ, ನೇಸರಗಿ, ಬೆಂಡಿಗೇರಿ ಕ್ರಾಸ್ ಮಾರ್ಗಗಳನ್ನು ಬಳಸಿಕೊಳ್ಳಬೇಕು. ಅದೇ ರೀತಿ ನಿಪ್ಪಾಣಿ, ಕೊಲ್ಹಾಪುರ, ಯಮಕನಮರ್ಡಿ ಕಡೆಗಳಿಂದ ಬರುವ ವಾಹನಗಳು ರಾಮ ಡಾಬಾ ಹತ್ತಿರ ಬಲ ತಿರುವು ಪಡೆದುಕೊಂಡು ಮುಂದೆ ಸಂಚರಿಸಬೇಕು.
ಬಾಗಲಕೋಟೆ ಕಡೆಯಿಂದ ಬೆಳಗಾವಿ ನಗರ ಕಡೆಗೆ ಸಂಚರಿಸುವ ವಾಹನಗಳು ನೇಸರಗಿ, ಗೋಕಾಕ ಮಾರ್ಗವಾಗಿ ಸಂಚರಿಸಬೇಕು. ಬೆಳಗಾವಿ ನಗರದಿಂದ ಯಡಿಯೂರಪ್ಪ ರಸ್ತೆ ಮೂಲಕ ಅಲಾರವಾಡ ಬ್ರಿಡ್ಜ್ ಕಡೆಗೆ ಸಂಚರಿಸುವ ವಾಹನಗಳು ಬದಲಿ ಮಾರ್ಗ ಬಳಸಿಕೊಳ್ಳಬೇಕು. ಶನಿವಾರ ಹಾಗೂ ರವಿವಾರ ಎರಡು ದಿನಗಳ ಕಾಲ ರಸ್ತೆ ಮಾರ್ಗಗಳನ್ನು ಬದಲಾವಣೆ ಮಾಡಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಎರಡು ದಿನ ಮೋದಿ ಪ್ರಚಾರ: ಎರಡು ದಿನಗಳ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ, ಏಪ್ರಿಲ್ 28ರಂದು ಬೆಳಗ್ಗೆ ಬೆಳಗಾವಿ ಕಾರ್ಯಕ್ರಮದ ಬಳಿಕ, ಮಧ್ಯಾಹ್ನ 12 ಗಂಟೆಗೆ ಶಿರಸಿ, 2 ಗಂಟೆಗೆ ದಾವಣಗೆರೆ, ಸಂಜೆ 4 ಗಂ ಟೆಗೆ ಬಳ್ಳಾರಿ ಹಾಗೂ ಏ.29 ರಂದು ಬೆಳಗ್ಗೆ 11 ಗಂಟೆಗೆ ಬಾಗಲಕೋಟೆಯಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಚಿವ ಶ್ರೀರಾಮುಲು, ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಪಿ.ಸಿ.ಗದ್ದಿಗೌಡರ್, ಸಂಸದ ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಕಣಕ್ಕಿಳಿದಿರುವ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತಬೇಟಿ ನಡೆಸುವರು.