ಬೆಳಗಾವಿ: ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚೆನ್ನಮ್ಮನ ಬಗ್ಗೆ ಅದೆಷ್ಟೋ ವಿಚಾರಗಳು ಇನ್ನೂ ತಿಳಿದಿಲ್ಲ. ಚೆನ್ನಮ್ಮ ಮತ್ತು ಕಿತ್ತೂರು ಸಂಸ್ಥಾನದ ಬಗ್ಗೆ ಅಧ್ಯಯನ ಕೈಗೊಳ್ಳಲು ಆರಂಭಿಸಿದ ರಾಣಿ ಚೆನ್ನಮ್ಮ ಅಧ್ಯಯನ ಪೀಠ ಅನುದಾನ ಕೊರತೆಯಿಂದ ಇದ್ದೂ ಇಲ್ಲದಂತಾಗಿದೆ. ಅನುದಾನ ನೀಡದಿದ್ದರೆ ಈ ಪೀಠವನ್ನು ಸ್ಥಾಪಿಸಿದ್ದಾದರೂ ಏಕೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ 2017ರಲ್ಲಿ ರಾಣಿ ಚೆನ್ನಮ್ಮ ಅಧ್ಯಯನ ಪೀಠ ಆರಂಭಿಸಲಾಯಿತು. ಪೀಠ ಸ್ಥಾಪಿಸಿದ ಸರ್ಕಾರ, ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಅನುದಾನ ನೀಡಿಲ್ಲ. ಹೀಗಾಗಿ, ವಿಶ್ವವಿದ್ಯಾಲಯದ ಆಂತರಿಕ ಸಂಪನ್ಮೂಲದಲ್ಲೇ ಅಧ್ಯಯನ ಪೀಠ ನಡೆಯುತ್ತಿದೆ.
ಅಧ್ಯಯನ ಪೀಠಕ್ಕೆ ವಿಶ್ವವಿದ್ಯಾಲಯದಲ್ಲಿ ಪ್ರತ್ಯೇಕ ಕೊಠಡಿ ಇಲ್ಲ. ನಿರ್ದೇಶಕ, ಸಂಯೋಜಕ ಎಂಬೆರಡು ಹುದ್ದೆಗಳು ಬಿಟ್ಟರೆ ಬೇರೆ ಸಿಬ್ಬಂದಿ ನೇಮಕಾತಿಯೂ ಆಗಿಲ್ಲ. ಚೆನ್ನಮ್ಮನ ಹೆಸರಲ್ಲಿ ಹೀಗೊಂದು ಪೀಠ ಇದೆ ಅಂತಾನೂ ಗೊತ್ತಾಗದ ಪರಿಸ್ಥಿತಿ ಇದೆ. ಸಂಶೋಧನೆ ಕೈಗೊಳ್ಳಲು ಕೇಂದ್ರವಾಗಲಿ, ವಸ್ತುಗಳನ್ನು ಸಂಗ್ರಹಿಸಿಡಲು ಕಟ್ಟಡ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಚೆನ್ನಮ್ಮನ ಜೀವನಗಾಥೆ ಕುರಿತು ಅನೇಕ ವಿಶೇಷ ಉಪನ್ಯಾಸ, ವಿಚಾರ ಸಂಕೀರಣಗಳನ್ನು ಹಮ್ಮಿಕೊಳ್ಳಲಾಗಿದೆ. ಉಪನ್ಯಾಸಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಕರ್ನಾಟಕದ ರಾಣಿಯರು, ಕಿತ್ತೂರು ಸಂಸ್ಥಾನ, ಬೆಳಗಾವಿ ಜಿಲ್ಲೆಯ ಸಂಸ್ಥಾನಗಳು, ಕಿತ್ತೂರು ಶೋಧವೃಕ್ಷ, ಕಿತ್ತೂರು ಅನುಸಂಧಾನದ ನೆಲೆಗಳು ಪ್ರಕಟವಾದ ಐದು ಪುಸ್ತಕಗಳು. ಇನ್ನೂ ಮೂರು ಪುಸ್ತಕಗಳು ಪ್ರಕಟಣೆಯ ಹಂತದಲ್ಲಿವೆ. 200ನೇ ವಿಜಯೋತ್ಸವ ನಿಮಿತ್ತ 'ನಾನು ಚೆನ್ನಮ್ಮ, ನಾನೂ ಚೆನ್ನಮ್ಮ' ಪುಸ್ತಕ ಬಿಡುಗಡೆಗೊಳಿಸಲು ಪೀಠ ಅಂತಿಮ ಸಿದ್ಧತೆ ನಡೆಸುತ್ತಿದೆ.
ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಈಟಿವಿ ಭಾರತ ಜೊತೆಗೆ ಮಾತನಾಡಿ, "ಪೀಠವು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅನುದಾನದ ಕೊರತೆ ಕಾಡುತ್ತಿದೆ. ಸರ್ಕಾರ 10 ಕೋಟಿ ರೂ. ನೀಡಿದರೆ ತುಂಬಾ ಅನುಕೂಲ ಆಗುತ್ತದೆ. ಇದರಿಂದ ಹೆಚ್ಚಿನ ಸಂಶೋಧನೆ ಕೈಗೊಳ್ಳಲು, ಮ್ಯೂಸಿಯಂ ನಿರ್ಮಾಣ ಸೇರಿ ಮತ್ತಿತರ ವ್ಯವಸ್ಥೆಗಳನ್ನು ಮಾಡಬಹುದಾಗಿದೆ. ಈ ಹಿಂದೆ ಹಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿತ್ತು. ಆದರೆ, ಅನುದಾನ ಮಾತ್ರ ಬಂದಿಲ್ಲ. ಹಾಗಾಗಿ, ಮತ್ತೊಮ್ಮೆ ಪ್ರಸ್ತಾವನೆ ಕಳಿಸುತ್ತೇವೆ. ವಿದ್ಯಾರ್ಥಿಗಳನ್ನು ಕೌಶಲ್ಯಯುಕ್ತರನ್ನಾಗಿ ರೂಪಿಸಬೇಕು. ಗ್ರಾಮೀಣ ವಿದ್ಯಾರ್ಥಿನಿಯರಿಗೆ ಉತ್ತಮ ತರಬೇತಿ ನೀಡಬೇಕಿದೆ. ಪದವಿ ಜೊತೆಗೆ ಹೆಚ್ಚಿನ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಬೇಕಿದೆ. ಹಾಗಾಗಿ, 200ನೇ ವಿಜಯೋತ್ಸವದ ಸಂಭ್ರಮದಲ್ಲಿ ಅಧ್ಯಯನ ಪೀಠಕ್ಕೆ ಸರ್ಕಾರ ಹತ್ತು ಕೋಟಿ ನೀಡುವ ಮೂಲಕ ಶಕ್ತಿ ತುಂಬಬೇಕಿದೆ" ಎಂದು ಕೇಳಿಕೊಂಡರು.
ರಾಣಿ ಚೆನ್ನಮ್ಮ ಅಧ್ಯಯನ ಪೀಠದ ನಿರ್ದೇಶಕಿ ಪ್ರೊ.ನಾಗರತ್ನಾ ಪರಾಂಡೆ ಮಾತನಾಡಿ, "ಪೀಠವು ತುಂಬಾ ಉತ್ಸಾಹದಿಂದ ಕೆಲಸ ಮಾಡುತ್ತಿದೆ. ಅನೇಕ ಉಪನ್ಯಾಸ, ವಿಚಾರ ಸಂಕೀರಣಗಳನ್ನು ಹಮ್ಮಿಕೊಳ್ಳಲಾಗಿದೆ. ರಾಣಿ ಚೆನ್ನಮ್ಮನಿಗೆ ಸಂಬಂಧಿಸಿದ ಲಂಡನ್ ಹಾಗೂ ಪುಣೆಯಲ್ಲಿರುವ ಮಹತ್ವದ ದಾಖಲೆಗಳನ್ನು ತರಲು ಅನುದಾನದ ಕೊರತೆಯಿದೆ. ಇನ್ನೂ ಹೆಚ್ಚಿನ ಕೆಲಸ ಮತ್ತು ಸಂಶೋಧನೆ ಕೈಗೊಳ್ಳಲು ಸರ್ಕಾರ ವಿಶೇಷ ಅನುದಾನ ನೀಡಬೇಕು" ಎಂದು ಕೋರಿದರು.
"ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಸೊಕ್ಕಿನಿಂದ ಮೆರೆಯುತ್ತಿದ್ದ ಬ್ರಿಟಿಷರನ್ನು ರಣರಂಗದಲ್ಲಿ ರಾಣಿ ಚೆನ್ನಮ್ಮ ಮಕಾಡೆ ಮಲಗಿಸಿದ್ದಕ್ಕೆ ದ್ವಿಶತಮಾನದ ಸಂಭ್ರಮ. 200ನೇ ವಿಜಯೋತ್ಸವ ಅದ್ಧೂರಿ ಆಚರಣೆಗೆ ದಿನಗಣನೆ ಶುರುವಾಗಿದೆ. ಈ ಸವಿನೆನಪಿಗೋಸ್ಕರ ಪೀಠಕ್ಕೆ ಪ್ರತಿ ವರ್ಷ 25 ಲಕ್ಷ ರೂ. ಅನುದಾನವನ್ನು ಸರ್ಕಾರ ಒದಗಿಸಬೇಕು" ಎಂಬುದು ಕಾದಂಬರಿಕಾರರೂ ಆಗಿರುವ ರಾಣಿ ಚೆನ್ನಮ್ಮ ಅಧ್ಯಯನ ಪೀಠದ ಸದಸ್ಯ ಯ.ರು.ಪಾಟೀಲ ಅವರ ಅಭಿಪ್ರಾಯ.
"ರಾಣಿ ಚೆನ್ನಮ್ಮ ಅಧ್ಯಯನ ಪೀಠ ಸ್ಥಾಪಿಸಿದ್ದಕ್ಕೆ ನಾವೆಲ್ಲಾ ಖುಷಿಪಟ್ಟಿದ್ದೆವು. ಆದರೆ, ಅದು ಆರಂಭವಾದ ದಿನದಿಂದಲೂ ಅನುದಾನ ನೀಡದಿರುವುದು ಸರಿಯಲ್ಲ. ಅನುದಾನ ಕೊರತೆಯಿಂದಾಗಿ ಪೀಠದಿಂದ ಪರಿಣಾಮಕಾರಿ ಕೆಲಸಗಳು ಆಗುತ್ತಿಲ್ಲ. ಇದು ತುಂಬಾ ನೋವಿನ ಸಂಗತಿ. ತಕ್ಷಣವೇ ಸರ್ಕಾರ ಎಚ್ಚೆತ್ತುಕೊಂಡು ವಿಶೇಷ ಅನುದಾನ ಘೋಷಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ." - ಶ್ರೀನಿವಾಸ ತಾಳೂಕರ, ಹಿರಿಯ ಕನ್ನಡ ಹೋರಾಟಗಾರ,ಬೆಳಗಾವಿ
ಇದನ್ನೂ ಓದಿ: ಕಿತ್ತೂರು ಇತಿಹಾಸ ಸಾರುತ್ತಿದೆ ಇಂದಿರಾ ಗಾಂಧಿ ಉದ್ಘಾಟಿಸಿದ್ದ ರಾಣಿ ಚೆನ್ನಮ್ಮ ವಸ್ತು ಸಂಗ್ರಹಾಲಯ