ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಪೊಲೀಸರು ಇಂದು ಬೆಳ್ಳಂಬೆಳಿಗ್ಗೆ ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬಾನ್ಯಾಂಗ್ ಮಾರ್ಗದರ್ಶನದಲ್ಲಿ ಡಿಸಿಪಿ ರೋಹನ್ ಜಗದೀಶ್ ನೇತೃತ್ವದ ತಂಡವು ಜೈಲಿನಲ್ಲಿ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ದಿಢೀರ್ ದಾಳಿ ನಡೆಸಿದೆ. ಒಂದು ಗಂಟೆಗೂ ಹೆಚ್ಚು ಕಾಲ ತಪಾಸಣೆ ನಡೆಸಲಾಗಿದೆ. ನಗರದ ಐದೂ ವಿಭಾಗದ ಎಸಿಪಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಈ ಹಿಂದೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಇದೇ ಜೈಲಿನಿಂದ ಜೀವ ಬೆದರಿಕೆ ಕರೆ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಅಲ್ಲದೇ ಕೈದಿಗಳ ಗಲಾಟೆ, ಮೊಬೈಲ್ ಬಳಕೆ ಸೇರಿ ಬಹಳಷ್ಟು ಆರೋಪಗಳೂ ಕೇಳಿ ಬಂದಿವೆ.
ಡಿಸಿಪಿ ರೋಹನ್ ಜಗದೀಶ್ ಮಾತನಾಡಿ, "ನಮ್ಮ ಎಸಿಪಿಗಳು, ಇನ್ಸ್ಪೆಕ್ಟರ್ಗಳು ಸೇರಿ 146 ಸಿಬ್ಬಂದಿ ಶ್ವಾನ ದಳದೊಂದಿಗೆ ಬಂದು ಇಡೀ ಜೈಲು ತಪಾಸಣೆ ಮಾಡಿದೆವು. ಜೈಲಿನ ವಾಸ್ತವತೆ ತಿಳಿಯುವುದು ಇದರ ಉದ್ದೇಶ. ತಂಬಾಕು, ಬೀಡಿ, ಸಿಗರೇಟು, ಸಣ್ಣಪುಟ್ಟ ಚಾಕುಗಳು ಸಿಕ್ಕಿವೆ. ಭದ್ರತೆ ಇದ್ದರೂ ಸಹ ಒಳಗೆ ಇಂಥವೆಲ್ಲ ಹೇಗೆ ಹೋಗ್ತಿವೆ ಎಂಬುದನ್ನು ತನಿಖೆ ಮಾಡಬೇಕಾಗಿದೆ. ಸದ್ಯಕ್ಕೆ ಮೊಬೈಲ್ ಸಿಕ್ಕಿಲ್ಲ. ಆದರೆ, ಚಾರ್ಜರ್ಗಳು ದೊರೆತಿವೆ. ಬ್ಲೂಟೂತ್ ಡಿವೈಸ್ಗಳು ಕಂಡುಬಂದಿದ್ದು, ವಶಕ್ಕೆ ತೆಗೆದುಕೊಂಡಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ಶತಮಾನದ ಸಂಭ್ರಮದಲ್ಲಿ ಬೆಳಗಾವಿ ಹಿಂಡಲಗಾ ಜೈಲು.. ರಾಜ್ಯದಲ್ಲಿ ಕೈದಿಗಳನ್ನು ನೇಣಿಗೇರಿಸುವ ಏಕೈಕ ಕಾರಾಗೃಹವಿದು..!