ಬೆಳಗಾವಿ: ರಾಜ್ಯಾದ್ಯಂತ ನಂದಿನಿ ಹಾಲಿನ ಬೆಲೆ ಏರಿಸಲಾಗಿದೆ. ಪ್ರತಿ ಲೀಟರ್ಗೆ 2 ರೂಪಾಯಿ ಹೆಚ್ಚಿಸಲಾಗಿದೆ. ಇದೇ ವೇಳೆ, 1 ಲೀಟರ್, ಅರ್ಧ ಲೀಟರ್ ಹಾಲಿನ ಜೊತೆ 50 ಎಂಎಲ್ ಹೆಚ್ಚುವರಿ ಹಾಲು ನೀಡಲು ನಿರ್ಧರಿಸಲಾಗಿದೆ. ಪರಿಷ್ಕೃತ ದರ ನಾಳೆ (ಜೂನ್ 26)ಯಿಂದಲೇ ಜಾರಿಗೆ ಬರಲಿದೆ. ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್) ನಂದಿನಿ ಹಾಲು ಏರಿಸಿದ್ದಕ್ಕೆ ಇಡೀ ರಾಜ್ಯಾದ್ಯಂತ ಜನಾಕ್ರೋಶ ವ್ಯಕ್ತವಾಗಿದ್ದು, ಅದರಂತೆ ಬೆಳಗಾವಿ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಪ್ರಕಾಶ ನಾಯಿಕ ಎಂಬವರು 'ಈಟಿವಿ ಭಾರತ್' ಜೊತೆಗೆ ಮಾತನಾಡಿ, "ಈ ಗ್ಯಾರಂಟಿ ಸರ್ಕಾರ ಒಂದು ಕಡೆ ಕೊಟ್ಟಂಗೆ ಮಾಡಿ, ಮತ್ತೊಂದು ಕಡೆ ಕಸಿದುಕೊಳ್ಳುವ ಕೆಲಸ ಮಾಡಿ, ಜನರಿಂದ ಹಣ ಲೂಟಿ ಮಾಡುತ್ತಿದೆ. ಇತ್ತೀಚಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದ್ದರು. ಈಗ ಹಾಲಿನ ದರ ಏರಿಕೆಯಿಂದ ಜನರು ಜೀವನ ನಡೆಸುವುದೇ ದುಸ್ಥರವಾಗಲಿದೆ. 14 ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆದಿರುವ ಸಿಎಂ ಸಿದ್ದರಾಮಯ್ಯ, ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಸಿ, ಜನಸಾಮಾನ್ಯರಿಗೆ ತೊಂದರೆ ಕೊಟ್ಟರೆ ಅವರು ಅಷ್ಟೊಂದು ಬಾರಿ ಬಜೆಟ್ ಮಂಡಿಸಿದ್ದಕ್ಕೆ ಏನು ಅರ್ಥ" ಎಂದು ಪ್ರಶ್ನಿಸಿದರು.
"ಕನ್ನಂಬಾಡಿ ಅಂಥ ಡ್ಯಾಮ್ ಕಟ್ಟಲು ಇವರೇನು ಬೆಲೆ ಏರಿಕೆ ಮಾಡುತ್ತಿದ್ದಾರಾ?. ಏನಾದರೂ ದೂರದೃಷ್ಟಿ ಇಟ್ಟುಕೊಂಡು ತೆರಿಗೆ ಹೆಚ್ಚಿಸಿದರೆ ನಾವು ಒಪ್ಪಿಕೊಳ್ಳುತ್ತೇವೆ. ಆದರೆ, ದಿನನಿತ್ಯದ ಬದುಕಿಗೆ ಕೊಳ್ಳಿ ಇಡುವ ಕೆಲಸ ಎಷ್ಟು ಸರಿ?. ನಿಮ್ಮ ವೈಫಲ್ಯ ಇದರಲ್ಲಿ ಎದ್ದು ಕಾಣುತ್ತದೆ. ಸಿದ್ದರಾಮಯ್ಯ ಅವರೇ ನೀವು ನಿಜವಾದ ಅರ್ಥಶಾಸ್ತ್ರಜ್ಞ ಅಲ್ಲ. ನಿಮ್ಮದು ಜನಪರ ಸರ್ಕಾರ ಅಲ್ಲ. ದಯವಿಟ್ಟು ಈಗಲಾದರೂ ಎಚ್ಚೆತ್ತುಕೊಂಡು ಬೆಲೆ ಕಡಿಮೆ ಮಾಡಿ" ಎಂದು ಆಗ್ರಹಿಸಿದರು.
ಸ್ಥಳೀಯ ಕಿರಣಕುಮಾರ ಪಾಟೀಲ ಮಾತನಾಡಿ, "ಹಾಲಿನ ದರ ಏರಿಕೆಯಿಂದ ಜನಸಾಮಾನ್ಯರು, ಬಡವರಿಗೆ ತೊಂದರೆ ಆಗಲಿದೆ. ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಜನಾಭಿಪ್ರಾಯ ಸಂಗ್ರಹಿಸಬೇಕು. ಆದರೆ, ಏಕಾಏಕಿ ಹಾಲಿನ ದರ ಏರಿಸಿದ್ದು ಜನರ ಬದುಕಿಗೆ ದೊಡ್ಡ ಹೊಡೆತ ನೀಡಿದೆ. ಮೊದಲು ಪೆಟ್ರೋಲ್, ಡೀಸೆಲ್, ಈಗ ಹಾಲಿನ ದರ ಏರಿಸಿದ್ದಾರೆ. ಒಂದು ಫ್ರೀ ಜೊತೆಗೆ ಇಂಥ ನೂರು ದರಗಳ ಏರಿಕೆಯೂ ನಮಗೆಲ್ಲಾ ಫ್ರೀಯಾಗಿ ಬರುತ್ತಿವೆ. ಇನ್ನು ಈ ಹೆಚ್ಚುವರಿ 2 ರೂ. ಹಾಲು ಉತ್ಪಾದಿಸಿದ ರೈತರಿಗೆ ಹೋದರೆ ನನ್ನಷ್ಟು ಖುಷಿ ಪಡುವವರು ಮತ್ತೊಬ್ಬರಿಲ್ಲ. ಆದರೆ, ಇದು ಸರ್ಕಾರ, ರಾಜಕಾರಣಿಗಳು ಮತ್ತು ಅಧಿಕಾರಿಗಳ ಜೇಬಿಗೆ ಹೋಗುತ್ತದೆ" ಎಂದು ಆರೋಪಿಸಿದರು.
ಇದನ್ನೂ ಓದಿ: ಹೆಚ್ಚುವರಿ ಹಾಲಿಗೆ 2 ರೂಪಾಯಿ ನಿಗದಿಪಡಿಸಲಾಗಿದೆಯೇ ಹೊರತು ಹಾಲಿನ ಬೆಲೆ ಏರಿಸಿಲ್ಲ: ಸಿಎಂ - CM Siddaramaiah