ಬೆಳಗಾವಿ: ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ ಲೋಕ ಕದನದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಗೆದ್ದು ಬೀಗಿದ್ದಾರೆ. ಗೆಲುವಿನ ಉತ್ಸಾಹದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಪರಾಭವಗೊಂಡಿದ್ದಾರೆ.
ಇದೇ ಮೊದಲ ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್ ವಿರುದ್ಧ ಆರಂಭದಲ್ಲಿ ಜಿಲ್ಲೆಯ ಬಿಜೆಪಿ ನಾಯಕರು ತೀವ್ರ ಅಸಮಾಧಾನ ಹೊರ ಹಾಕಿದ್ದರು. ಹೊರ ಜಿಲ್ಲೆಯವರಿಗೆ ಟಿಕೆಟ್ ನಿಡಿದ್ದಕ್ಕೆ ಶೆಟ್ಟರ್ ಗೋಬ್ಯಾಕ್ ಅಭಿಯಾನ ಕೂಡ ಮಾಡಿದ್ದರು. ಆದರೆ ಶೆಟ್ಟರ್ ಅಸಮಾಧಾನಿತರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಾನು ಹೊರಗಿನವನಲ್ಲ. ನನಗೂ ಬೆಳಗಾವಿಗೂ 30 ವರ್ಷಗಳ ನಂಟಿದೆ. ಜಿಲ್ಲೆಗೆ ನನ್ನದೂ ಕಾಣಿಕೆ ಇದೆ ಎಂಬ ವಿಚಾರಗಳನ್ನು ಮತದಾರರಿಗೆ ಮನದಟ್ಟು ಮಾಡುವಲ್ಲಿ ಸಫಲರಾಗಿದ್ದು, ಗೆಲ್ಲಲು ಸುಲಭವಾಯಿತು. ಅಲ್ಲದೇ ಪ್ರಧಾನಿ ಮೋದಿ ಬೃಹತ್ ಸಮಾವೇಶ ಕೂಡ ಶೆಟ್ಟರ್ ಗೆ ಆನೆ ಬಲ ತಂದು ಕೊಟ್ಟಿತು.
6 ಬಾರಿ ಹುಬ್ಬಳ್ಳಿ ಶಾಸಕರಾಗಿದ್ದ ಜಗದೀಶ ಶೆಟ್ಟರ್ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತೊರೆದು, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದರು. ಆ ಬಳಿಕ ಬದಲಾದ ರಾಜಕೀಯದಲ್ಲಿ ಮರಳಿ ಬಿಜೆಪಿ ಗೂಡಿಗೆ ಬಂದಿದ್ದರು. ಲೋಕಸಭೆ ಚುನಾವಣೆಗೆ ಕ್ಷೇತ್ರದ ಹುಡುಕಾಟ ನಡೆಸಿದಾಗ ಸಿಕ್ಕಿದ್ದು ಬೆಳಗಾವಿ. ಗೆಲುವಿನ ಉತ್ಸಾಹದಲ್ಲೆ ಟಿಕೆಟ್ ತೆಗೆದುಕೊಂಡು ಬಂದಿದ್ದ ಶೆಟ್ಟರ್ ಅವರನ್ನು ಬೆಳಗಾವಿ ಲೋಕಸಭೆ ಕ್ಷೇತ್ರದ ಜನ ಕೈ ಬಿಡಲಿಲ್ಲ.
ಬೀಗರ ಕ್ಷೇತ್ರದಲ್ಲಿ ಗೆಲುವು: ಬೆಳಗಾವಿ ಲೋಕಸಭೆ ಕ್ಷೇತ್ರ ಬಿಜೆಪಿ ಭದ್ರಕೋಟೆ. ಅದರಲ್ಲೂ ಕಳೆದ ಐದೂ ಚುನಾವಣೆಗಳಲ್ಲಿ ಬಿಜೆಪಿಯಿಂದ ದಿ. ಸುರೇಶ ಅಂಗಡಿ ಮತ್ತು ಮಂಗಳಾ ಅಂಗಡಿ ಗೆದ್ದು ಇತಿಹಾಸ ನಿರ್ಮಿಸಿದ್ದರು. ಈಗ ಬೀಗರ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಜಗದೀಶ ಶೆಟ್ಟರ್ ಬಿಜೆಪಿ ಗೆಲುವಿನ ನಾಗಾಲೋಟ ಮುಂದುವರಿಸಿದ್ದಾರೆ.
ಶೆಟ್ಟರ್ ಹಿರಿತನಕ್ಕೆ ಮಣೆ: ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಸಚಿವ ಸ್ಥಾನ, ಸ್ಪೀಕರ್ ಹುದ್ದೆ ಅಲಂಕರಿಸಿದ ಸಾಕಷ್ಟು ಅನುಭವ ಶೆಟ್ಟರ್ ಅವರಿಗಿದೆ. ಆದರೆ, ಇದೇ ಮೊದಲ ಬಾರಿ ಚುನಾವಣಾ ಕಣಕ್ಕಿಳಿದಿರುವ ಮೃಣಾಲ್ಗೆ ಯಾವುದೇ ಅನುಭವ ಇರಲಿಲ್ಲ. ಬೆಳಗಾವಿ ಜನ ಶೆಟ್ಟರ್ ಹಿರಿತನಕ್ಕೆ ಮಣೆ ಹಾಕಿ, ಮೃಣಾಲ್ ಯುವ ನಾಯಕತ್ವಕ್ಕೆ ಮನ್ನಣೆ ನೀಡಲಿಲ್ಲ.
ಭದ್ರಕೋಟೆ ಉಳಿಸಿಕೊಂಡ ಬಿಜೆಪಿ: 2004ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುರೇಶ್ ಅಂಗಡಿ ಮೊದಲ ಚುನಾವಣೆಯಲ್ಲೆ ಗೆಲುವಿನ ನಗೆ ಬೀರಿದ್ದರು. ಅದಾದ ಬಳಿಕ 2009, 2014, 2018ರ ಲೋಕಸಭೆ ಚುನಾವಣೆಗಳಲ್ಲಿ ಸತತವಾಗಿ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದರು. ಅಲ್ಲದೇ ಕೇಂದ್ರದಲ್ಲಿ ಸಚಿವರೂ ಆಗಿದ್ದರು. ಆದರೆ, 2019ರಲ್ಲಿ ಮಹಾಮಾರಿ ಕೋವಿಡ್ನಿಂದ ಸುರೇಶ್ ಅಂಗಡಿ ಅಕಾಲಿಕವಾಗಿ ಮೃತರಾದರು. ಬಳಿಕ 2021ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಅವರ ಧರ್ಮಪತ್ನಿ ಮಂಗಳಾ ಅಂಗಡಿ ಗೆಲುವು ಸಾಧಿಸಿದ್ದರು. ಈ ಬಾರಿಯ ಚುನಾವಣೆಯಲ್ಲೂ ಅವರೇ ಟಿಕೆಟ್ ಬಯಸಿದ್ದರು. ಅಲ್ಲದೇ ಹಲವು ಸ್ಥಳೀಯ ನಾಯಕರು ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಶೆಟ್ಟರ್ಗೆ ಟಿಕೆಟ್ ಘೋಷಿಸಿತ್ತು. ಹೈಕಮಾಂಡ್ ಲೆಕ್ಕಾಚಾರ ಸಕ್ಸಸ್ ಆಗಿದ್ದು, ಶೆಟ್ಟರ್ ಗೆದ್ದು ಬೆಳಗಾವಿ ಬಿಜೆಪಿ ಭದ್ರಕೋಟೆ ಎಂದು ಮತ್ತೆ ಸಾಬೀತಾಗಿದೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಕೊನೆಗೂ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಗೆಲುವಿನ ನಗೆ ಬೀರಿದ್ದಾರೆ.
ಗ್ಯಾರಂಟಿಗೆ ಕೈ ಕೊಟ್ಟ ಮತದಾರ ಪ್ರಭು: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪ್ರಭಾವದಿಂದ ಗೆಲುವಿನ ಉತ್ಸಾಹದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಮೃಣಾಲ್ ಹೆಬ್ಬಾಳ್ಕರ್ ಲೆಕ್ಕಾಚಾರ ಉಲ್ಟಾ ಆಗಿದೆ. ಗ್ಯಾರಂಟಿಗಳಿಗೆ ಮತದಾರ ಪ್ರಭುಗಳು ಕೈ ಕೊಟ್ಟು ಮೋದಿ ಗ್ಯಾರಂಟಿಗೆ ಜೈ ಎಂದಿದ್ದಾರೆ.