ಬೆಳಗಾವಿ: ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆಗೆ ನಿನ್ನೆ (ಮಂಗಳವಾರ) ತೆರೆ ಬಿದ್ದಿರುವ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭೆ ಅಭ್ಯರ್ಥಿಗಳ ಭವಿಷ್ಯ ಇವಿಎಂ ಯಂತ್ರಗಳಲ್ಲಿ ಭದ್ರವಾಗಿದೆ.
ಬೆಳಗಾವಿಯ ಆರ್ಪಿಡಿ ಕಾಲೇಜಿನಲ್ಲಿ ಚುನಾವಣಾಧಿಕಾರಿ ನಿತೇಶ ಪಾಟೀಲ್ ನೇತೃತ್ವದಲ್ಲಿ ಇಂದು (ಬುಧವಾರ) ಸ್ಟ್ರಾಂಗ್ ರೂಮ್ಗಳನ್ನು ಲಾಕ್ ಮಾಡಲಾಗಿದೆ. ಒಂದು ವಿಧಾನಸಭೆಗೆ ಎರಡು ಸ್ಟ್ರಾಂಗ್ ರೂಮ್ ಸ್ಥಾಪಿಸಲಾಗಿದೆ. ಬೆಳಗಾವಿಯ ಆರ್ಪಿಡಿ ಕಾಲೇಜಿನಲ್ಲಿ 17 ಕೊಠಡಿಗಳಲ್ಲಿ ಸ್ಟ್ರಾಂಗ್ ರೂಮ್ ನಿರ್ಮಾಣವಾಗಿದ್ದು, ರಾಜಕೀಯ ಪಕ್ಷಗಳ ಎಜೆಂಟ್ಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ಭದ್ರಪಡಿಸಲಾಗಿದೆ.
ಪ್ಲೈವುಡ್ ಬಳಸಿ ಕಿಟಕಿ, ಬಾಗಿಲು ಸಂಪೂರ್ಣ ಬಂದ್ ಮಾಡಲಾಗಿದ್ದು, ಆರ್ಪಿಡಿ ಕಾಲೇಜಿಗೆ ಮೂರು ಹಂತದಲ್ಲಿ ಬೀಗಿ ಭದ್ರತೆ ನಿಯೋಜಿಸಲಾಗಿದೆ. 80 ಸಿಸಿಟಿವಿ ಕ್ಯಾಮೆರಾಗಳು 24/7 ಕಾರ್ಯ ನಿರ್ವಹಿಸಲಿವೆ. ಸಿಐಎಸ್ಎಫ್, ಕೈಗಾರಿಕಾ ಭದ್ರತೆ ಪಡೆ ಹಾಗೂ ರಾಜ್ಯದ ಪೊಲೀಸ್ರಿಂದ ಭದ್ರತೆ ಒದಗಿಸಲಾಗಿದೆ. ಭದ್ರತೆ ಪರಿಶೀಲನೆ ಮಾಡಲು ಅಭ್ಯರ್ಥಿಗೆ ಸಿಸಿಟಿವಿ ಲಭ್ಯತೆಯನ್ನು ಚುನಾವಣೆ ಆಯೋಗ ನೀಡಿದೆ. ಸ್ಟ್ರಾಂಗ್ ರೂಮ್ ಭದ್ರತಾ ವ್ಯವಸ್ಥೆ ಬಗ್ಗೆ ತಮ್ಮ ಮೊಬೈಲ್ನಲ್ಲಿಯೇ ಅಭ್ಯರ್ಥಿಗಳು ನೋಡಬಹುದಾಗಿದೆ.
ಚುನಾವಣಾಧಿಕಾರಿ ನಿತೇಶ ಪಾಟೀಲ ಪ್ರತಿಕ್ರಿಯೆ: ಬೆಳಗಾವಿ ಟಿಳಕವಾಡಿ ಆರ್ಪಿಡಿ ಕಾಲೇಜಿನಲ್ಲಿ ಸ್ಟ್ರಾಂಗ್ ರೂಮ್ ನಿರ್ಮಿಸಲಾಗಿದ್ದು, ಪೊಲೀಸ್ ಕಣ್ಗಾವಲು ಹಾಕಲಾಗಿದೆ. ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಚುನಾವಣಾಧಿಕಾರಿ ನಿತೇಶ ಪಾಟೀಲ ಅವರು, ''ಚುನಾವಣಾ ಆಯೋಗದ ವೀಕ್ಷಕರು ಮತ್ತು ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ಸೀಲ್ ಮಾಡುತ್ತಿದ್ದೇವೆ. ಇದನ್ನು ಮತ ಏಣಿಕೆ ದಿನ ಜೂನ್ 4ರಂದು ಬೆಳಗ್ಗೆ 7.30ಕ್ಕೆ ಅಭ್ಯರ್ಥಿಗಳು ಹಾಗೂ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ತೆರೆಯಲಾಗುತ್ತದೆ. ಅಲ್ಲದೇ ಬಿಗಿ ಭದ್ರತೆ ನಿಯೋಜಿಸಲಾಗಿದ್ದು, 8 ಸ್ಟ್ರಾಂಗ್ ರೂಮ್ ಇದ್ದು, ಪ್ರತಿಯೊಂದು ವಿಧಾನಸಭೆ ಕ್ಷೇತ್ರಕ್ಕೂ ಎರಡೆರಡು ರೂಮ್, ಪೋಸ್ಟಲ್ ಬ್ಯಾಲೆಟ್ ಮತಗಳ ಏಣಿಕೆಗೆ ಒಂದು ರೂಮ್ ಮಾಡಿದ್ದೇವೆ'' ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ರಾಜ್ಯದಲ್ಲಿ ಮುಗೀತು ಲೋಕಸಭೆ ಚುನಾವಣೆ: 2ನೇ ಹಂತದಲ್ಲಿ ಶೇ 70.03 ಮತದಾನ - Lok Sabha Election in Karnataka