ಬೆಳಗಾವಿ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಬೃಹತ್ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದ್ದರು. ಶೆಟ್ಟರ್ಗೆ ಮಾಜಿ ಸಿಎಂ ಯಡಿಯೂರಪ್ಪ ಸಾಥ್ ಕೊಟ್ಟರು.
ಇಂದು ಬೆಳಗ್ಗೆ ಸಮಾದೇವಿ ದೇವಾಲಯದಲ್ಲಿ ಜಗದೀಶ ಶೆಟ್ಟರ್ ಪೂಜೆ ಸಲ್ಲಿಸಿದರು. ಸಮಾದೇವಿ ಗಲ್ಲಿಯಿಂದ ಆರಂಭವಾದ ಮೆರವಣಿಗೆ ಖಡೇಬಜಾರ್ ರಸ್ತೆ, ಗಣಪತಿ ಗಲ್ಲಿ, ಕಾಕತಿ ವೇಸ್, ಶನಿವಾರ ಕೂಟ್, ರಾಣಿ ಚನ್ನಮ್ಮ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿತು. ಚನ್ನಮ್ಮ ವೃತ್ತ ಸಂಪೂರ್ಣ ಕೇಸರಿಮಯವಾಗಿತ್ತು. ಬಿಜೆಪಿ ಕಾರ್ಯಕರ್ತರ ಕರತಾಡನ ಮುಗಿಲು ಮುಟ್ಟಿತು. ಇದೇ ವೇಳೆ ಗೋವಾ ಸಿಎಂ ಪ್ರಮೋದ ಸಾವಂತ, ಮಾಜಿ ಸಿಎಂ ಯಡಿಯೂರಪ್ಪ, ಅಭ್ಯರ್ಥಿ ಜಗದೀಶ ಶೆಟ್ಟರ್ ಅವರಿಗೆ ಬೃಹದಾಕಾರದ ಮಾಲಾರ್ಪಣೆ ಮಾಡಲಾಯಿತು. ಮೋದಿ, ಜೈ ಶ್ರೀರಾಮ ಜಯಘೋಷಗಳು ಕೇಳಿ ಬಂದವು.
ಜಿಲ್ಲೆಯ ನಾಯಕರು ಶೆಟ್ಟರ್ಗೆ ಸಾಥ್: ಗೋವಾ ಸಿಎಂ ಪ್ರಮೋದ ಸಾವಂತ್, ಶಾಸಕ ಅಭಯ ಪಾಟೀಲ್, ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಾಲಚಂದ್ರ ಜಾರಕಿಹೊಳಿ, ದುರ್ಯೋಧನ ಐಹೊಳೆ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಮಾಜಿ ಶಾಸಕ ಅನಿಲ್ ಬೆನಕೆ, ಮಾಜಿ ಸಚಿವ ಮುರುಗೇಶ್ ನಿರಾಣಿ, ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ ಸೇರಿ ಮತ್ತಿತರ ನಾಯಕರು ಶೆಟ್ಟರ್ಗೆ ಸಾಥ್ ನೀಡಿದರು.
ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಗದೀಶ ಶೆಟ್ಟರ್, ನಮ್ಮ ಕೋರಿಕೆಯಂತೆ ಇಂದು ದೊಡ್ಡ ಪ್ರಮಾಣದಲ್ಲಿ ಜನ ಸೇರಿದ್ದಾರೆ. ಕಾರ್ಯಕರ್ತರು, ಮುಖಂಡರು, ಅದರಲ್ಲೂ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿದ್ದು ಬಹಳ ಖುಷಿ ತಂದಿದೆ. ಅಲ್ಲದೇ ಇದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು, ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಬೇಕು. ಬೆಳಗಾವಿ ಲೋಕಸಭೆಯಿಂದ ಬಿಜೆಪಿಯನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕೆಂಬ ನಮ್ಮ ಕಾರ್ಯಕರ್ತರಿಗೆ ಇರುವ ಬದ್ಧತೆ, ಸ್ಫೂರ್ತಿ ತೋರಿಸುತ್ತದೆ ಎಂದರು.
ಸುಮ್ಮನೆ ಸುಳ್ಳು ಆಪಾದನೆ: ಬೆಳಗಾವಿಗೆ ಮೋಸ ಮಾಡಬೇಡಿ ಎಂಬ ಕಾಂಗ್ರೆಸ್ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಶೆಟ್ಟರ್, ಕಾಂಗ್ರೆಸ್ನವರಿಗೆ ಮೋದಿ, ಬಿಜೆಪಿ ಮತ್ತು ಶೆಟ್ಟರ್ ಬಗ್ಗೆ ಮಾತನಾಡಲು ಯಾವುದೇ ವಿಷಯ ಮತ್ತು ವಿಚಾರಗಳಿಲ್ಲ. ಸುಮ್ಮನೆ ಸುಳ್ಳು ಆಪಾದನೆ ಮಾಡುವುದು ಪ್ರಾರಂಭವಾಗಿದೆ. ಇದನ್ನು ಜನ ನಂಬುವುದಿಲ್ಲ. ಈಗ ಒಂದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಬೆಳಗಾವಿಗೆ ಏನು ಕಾಣಿಕೆ ಕೊಟ್ಟಿದೆ. ಹಾಗಾಗಿ ಎಲ್ಲದಕ್ಕೂ ಜನ ಉತ್ತರ ಕೊಡುತ್ತಾರೆ. ನಾನು ಅದಕ್ಕೆ ಉತ್ತರಿಸೋದಿಲ್ಲ. ಮೇ 7ಕ್ಕೆ ಚುನಾವಣೆ ನಡೆದು, ಜೂನ್ 4ಕ್ಕೆ ಫಲಿತಾಂಶ ಬರುತ್ತದೆ. ಆಗ ಬೆಳಗಾವಿ ಜನ ಅದಕ್ಕೆ ಉತ್ತರ ಕೊಡುತ್ತಾರೆ ಎಂದು ಜಗದೀಶ ಶೆಟ್ಟರ್ ತಿರುಗೇಟು ಕೊಟ್ಟರು.
ಹೆಚ್ಚು ಮತಗಳ ಅಂತರದಿಂದ ಗೆಲುವು: ಜನ ಯಾವ ರೀತಿ ಆಶೀರ್ವಾದ ಮಾಡುತ್ತಾರೆ ನೋಡೋಣ. ಅದು ಜನರ ಮೇಲೆ ಬಿಟ್ಟಿದ್ದು. ಇಷ್ಟೇ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಹೇಳುವುದಿಲ್ಲ. ಹೆಚ್ಚು ಮತಗಳ ಅಂತರದಿಂದ ಬೆಳಗಾವಿಯಲ್ಲಿ ಬಿಜೆಪಿ ಗೆದ್ದು ಬರುತ್ತದೆ. ದೇಶದ ಸುಭದ್ರತೆ ದೃಷ್ಟಿಯಿಂದ ಮುಂದಿನ ಪ್ರಧಾನಿ ಯಾರು ಆದರೆ ಯೋಗ್ಯ ಎಂಬುದನ್ನು ನಿರ್ಧರಿಸುವ ಚುನಾವಣೆ ಇದಾಗಿದೆ. ಜಾತಿ, ಗ್ರೀಡ್ ಯಾವುದೂ ಪರಿಣಾಮ ಬೀರುವುದಿಲ್ಲ. ಜಾತಿ ಮೀರಿ ಚುನಾವಣೆ ನಡೆಯಲಿದೆ ಎಂದು ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆ ಬಳಿಕ ಸರ್ಕಾರ ಪತನ: ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನ ಆಗುತ್ತದೆ ಎಂಬ ಆರೋಪಕ್ಕೆ ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಈಗ ಆಪರೇಷನ್ ಕಮಲ ಮಾಡುವ ಅವಶ್ಯಕತೆಯೇ ಇಲ್ಲ. ಅವರಲ್ಲಿ ಒಳಬೇಗುದಿ ಇದೆ. ಶಾಸಕರು ಬೇಜಾರು ಮತ್ತು ಅಸಮಾಧಾನಗೊಂಡಿದ್ದಾರೆ. ಒಂದು ವರ್ಷದಲ್ಲಿ ಯಾವುದೇ ಹೊಸ ಯೋಜನೆ, ಕೆಲಸ, ಅಭಿವೃದ್ಧಿ ಕೆಲಸಗಳು ಇಲ್ಲ. ಎಲ್ಲ ಕೆಲಸಗಳು ಸ್ಥಗಿತಗೊಂಡಿವೆ. ಆ ಹಿನ್ನೆಲೆ ಕೈ ಶಾಸಕರ ಒಳಬೇಗುದಿ ಯಾವಾಗ ಸ್ಫೋಟವಾಗುತ್ತದೆ ಗೊತ್ತಿಲ್ಲ ಎಂದರು.