ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಕಳೆದ 15 ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಪರಿಣಾಮವಾಗಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ದೂಧ್ ಗಂಗಾ, ವೇದಗಂಗಾ, ಪಂಚಗಂಗಾ, ಕೃಷ್ಣಾ ನದಿಗಳಲ್ಲಿ ಪ್ರವಾಹದ ಆತಂಕ ಸೃಷ್ಟಿಯಾಗಿದೆ. ಈ ನೆರೆಯ ನಡುವೆ ಬೃಹತ್ ಆಕಾರದ ಮೊಸಳೆ ಪ್ರತ್ಯಕ್ಷವಾಗಿದ್ದು, ನದಿ ತೀರದ ರೈತರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕುನ್ನೂರಗಿ ಗ್ರಾಮದಲ್ಲಿ ದೂಧ್ಗಂಗಾ ನದಿಯಲ್ಲಿ ಬೃಹದಾಕಾರದ ಮೊಸಳೆಯೊಂದು ಪ್ರತ್ಯಕ್ಷವಾಗಿದೆ. ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವ ಮಧ್ಯದಲ್ಲಿ, ದಂಡೆಯಲ್ಲಿ ಈ ಮೊಸಳೆ ಕಾಣಿಸಿಕೊಂಡಿದ್ದು, ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ.
ಕೃಷ್ಣಾ ನದಿಯಲ್ಲಿ ಸದ್ಯ ಒಂದು ಲಕ್ಷದ 70 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಒಳಹರಿವು ಇರುವುದರಿಂದ ನದಿ ಭೋರ್ಗರೆದು ಹರಿಯುತ್ತಿದೆ. ಕೃಷಿ ಜಮೀನುಗಳಿಗೆ ನೀರು ಆವರಿಸಿದ್ದು, ರೈತರು ನೂರಾರು ಹೆಕ್ಟೇರ್ ಕಬ್ಬು, ಇನ್ನಿತರ ಬೆಳೆಗಳು ನಾಶವಾಗುವ ಆತಂಕದಲ್ಲಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಈಗಾಗಲೇ ಏಳು ಪ್ರಮುಖ ಸೇತುವೆಗಳು ಜಲಾವೃತಗೊಂಡಿವೆ. ಎರಡು ಲಕ್ಷಕ್ಕಿಂತಲೂ ಹೆಚ್ಚು ಕೃಷ್ಣಾ ನದಿಯಲ್ಲಿ ಒಳಹರಿವು ಜಾಸ್ತಿಯಾದರೆ ನದಿ ತೀರದ ಕೆಲವು ಗ್ರಾಮಗಳ ಜನರನ್ನು ಸ್ಥಳಾಂತರ ಮಾಡುವ ಅನಿವಾರ್ಯತೆ ಎದುರಾಗುತ್ತದೆ.
ಚಿಕ್ಕೋಡಿ, ನಿಪ್ಪಾಣಿ ನದಿ ತೀರದ ಗ್ರಾಮಗಳಿಗೆ ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ಭೇಟಿ ನೀಡಿದರು. ಅಲ್ಲಿಯ ಸ್ಥಳೀಯ ಅಧಿಕಾರಿಗಳ ಜೊತೆಗೆ ಮಾಹಿತಿ ಪಡೆದುಕೊಂಡು, ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ದಿನದಿಂದ ದಿನಕ್ಕೆ ಕೃಷ್ಣ ನದಿಯಲ್ಲಿ ನೀರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಲ್ಲೋಳ ಗ್ರಾಮದಲ್ಲಿರುವ ದತ್ತ ಮಂದಿರ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಬೆಳಗಾವಿ ಜಿಲ್ಲೆಯಲ್ಲಿ 22 ಸೇತುವೆಗಳ ಮುಳುಗಡೆ- ಸಂಚಾರಕ್ಕೆ ನಿರ್ಬಂಧ: ಸಪ್ತನದಿಗಳಾದ ಮಲಪ್ರಭಾ, ಘಟಪ್ರಭಾ, ಕೃಷ್ಣಾ, ವೇದಗಂಗಾ, ದೂಧ್ಗಂಗಾ, ಹಿರಣ್ಯಕೇಶಿ ಮತ್ತು ಮಾರ್ಕಂಡೇಯ ನದಿಗಳು ಉಕ್ಕಿ ಹರಿಯುತ್ತಿವೆ. ಸಪ್ತನದಿಗಳು ಹರಿಯುವ ಬೆಳಗಾವಿ ಜಿಲ್ಲೆಯ ಖಾನಾಪುರ, ಗೋಕಾಕ, ಮೂಡಲಗಿ, ಹುಕ್ಕೇರಿ, ಚಿಕ್ಕೋಡಿ, ನಿಪ್ಪಾಣಿ ತಾಲ್ಲೂಕುಗಳಲ್ಲಿ ಈವರೆಗೆ 22 ಸೇತುವೆಗಳು ಮುಳುಗಡೆಯಾಗಿದ್ದು, ಸಂಚಾರಕ್ಕೆ ಸಂಚಕಾರ ಎದುರಾಗಿದೆ.
ಮುಳುಗಡೆಯಾದ ಸೇತುವೆಗಳು: ಚಿಕ್ಕಹಟ್ಟಿಹೊಳಿ–ಚಿಕ್ಕಮುನವಳ್ಳಿ, ಚಿಗಡೊಳ್ಳಿ– ನಲ್ಲಾನಟ್ಟಿ, ಗೋಕಾಕ್– ಲೋಳಸೂರ, ಮುನ್ಯಾಳ– ಹುಣಶ್ಯಾಳ ಪಿ.ಜಿ, ಪಟಗುಂದಿ– ತಿಗಡಿ, ಸುಣಧೋಳಿ– ಮೂಡಲಗಿ, ಅವರಾದಿ– ಮಹಾಲಿಂಗಪುರ, ಉದಗಟ್ಟಿ– ವಡೇರಹಟ್ಟಿ, ಅರ್ಜುನವಾಡ– ಕೋಚರಿ, ಯರನಾಳ– ಹುಕ್ಕೇರಿ, ಕುರಣಿ– ಕೋಚರಿ, ಭೋಜ– ಕಾರದಗಾ, ಭೋಜವಾಡಿ– ನಿಪ್ಪಾಣಿ, ಮಲ್ಲಿಕವಾಡ– ದಾನವಾಡ, ಸಿದ್ನಾಳ– ಅಕ್ಕೋಳ, ಭಾರವಾಡ– ಕುನ್ನೂರ, ಭೋಜ– ಕುನ್ನೂರ, ಜತ್ರಾಟ– ಭೀವಶಿ, ಬಾವನಸೌಂದತ್ತಿ– ಮಾಂಜರಿ ಸೇರಿ ಮತ್ತಿತರ ಸೇತುವೆಗಳು ಮುಳುಗಡೆಯಾಗಿವೆ.
ಮುಳುಗಡೆಯಾಗಿರುವ ಸೇತುವೆಗಳ ಮೇಲೆ ಜನರ ಓಡಾಟಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದು, ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬ್ಯಾರಿಕೇಡ್ ಕೂಡ ಹಾಕಿ, ಕಟ್ಚೆಚ್ಚರ ವಹಿಸಲಾಗಿದೆ.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಈ ಬಗ್ಗೆ ಮಾಹಿತಿ ನೀಡಿದ್ದು, "ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳ ದಡದಲ್ಲಿ ಸದ್ಯ ಪ್ರವಾಹ ಭೀತಿ ಇಲ್ಲ. ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈವರೆಗೆ 124 ಮನೆಗಳಿಗೆ ಹಾನಿಯಾಗಿದ್ದು, ಎರಡು ಮನೆಗಳು ಸಂಪೂರ್ಣ ಕುಸಿದಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ನಿಯಮಾವಳಿಯಂತೆ, ಪರಿಹಾರ ಬಿಡುಗಡೆಗೆ ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದೆ" ಎಂದು ಹೇಳಿದರು.
ಇದನ್ನೂ ಓದಿ: ಹಾಸನದಲ್ಲಿ ಮಳೆ ಆರ್ಭಟ; ಜವೇನಹಳ್ಳಿ ಮಠದ ಮೇಲೆ ಉರುಳಿದ ಬೃಹತ್ ಮರ - tree fell on Mutt