ಬೆಳಗಾವಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣದ ಆರೋಪಿ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿ ಶಾಕೀರ್ ಮೊಹಮ್ಮದ್ ಅಲಿಯಾಸ್ ಜಯೇಶ್ ಪೂಜಾರಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ನಿಜ ಎಂದು ಬೆಳಗಾವಿ ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಬೆಳಗಾವಿಯ 4ನೇ ಜೆಎಂಎಫ್ಸಿ ಕೋರ್ಟ್ಗೆ ಇಂದು ಬೆಳಗ್ಗೆ 11 ಗಂಟೆಗೆ ಹಾಜರುಪಡಿಸಿದ ಸಂದರ್ಭದಲ್ಲಿ ಈ ಘೋಷಣೆ ಕೂಗಿದ್ದಾನೆ. ಈತ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಎಂಬ ಗ್ರಾಮದ ನಿವಾಸಿ. ಮೂಲ ಹೆಸರು ಜಯೇಶ್ಕಾಂತ್ ಪೂಜಾರಿ. 14ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿದ್ದ. ಕೇರಳದ ಮಲ್ಲಾಪುರಂಗೆ ಹೋಗಿ ಅಲ್ಲಿ ಮತಾಂತರಗೊಂಡಿದ್ದಾನೆ. ಬಳಿಕ ತನ್ನ ಹೆಸರನ್ನು ಶಾಕೀರ್ ಮೊಹಮ್ಮದ್ ಎಂದು ಬದಲಾವಣೆ ಮಾಡಿಕೊಂಡಿದ್ದಾನೆ'' ಎಂದು ತಿಳಿಸಿದರು.
''ಈಗ ಹಿಂಡಲಗಾ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. 2018ರಲ್ಲಿ ಐಪಿಎಸ್ ಅಧಿಕಾರಿ, ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧ ಇಂದು ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಈ ವೇಳೆ, 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿದ್ದಾನೆ. ಈಗ ಪೊಲೀಸರು ಠಾಣೆಗೆ ಆತನನ್ನು ಕರೆದುಕೊಂಡು ಬಂದಿದ್ದಾರೆ. ಸದ್ಯ ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ, ಘೋಷಣೆ ಸಂಬಂಧ ಕೂಡ ಕೇಸ್ ದಾಖಲಿಸಲಾಗುವುದು'' ಎಂದು ಹೇಳಿದರು.
''ಮನೆ ಬಿಟ್ಟು ಬಂದ ಬಳಿಕ ಮುಂಬೈ ಸೇರಿ ಬೇರೆಡೆ ಅಲೆದಾಡುತ್ತಿದ್ದ. ಈತ ಜೋಡಿ ಪ್ರಕರಣ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ದಕ್ಷಿಣ ಕನ್ನಡದಲ್ಲಿ ನಡೆದ ಡಬಲ್ ಮರ್ಡರ್ ಕೇಸ್ನಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾನೆ. ಇದೇ ಪ್ರಕರಣದಲ್ಲಿ ಸದ್ಯ ಹಿಂಡಲಗಾ ಜೈಲಿನಲ್ಲಿ ಇರಿಸಲಾಗಿತ್ತು. ಪಾಕ್ ಪರ ಘೋಷಣೆ ಕೂಗಿರುವ ಸಂಬಂಧ ಪ್ರಾಥಮಿಕ ತನಿಖೆ ನಡೆಯುತ್ತಿದೆ. ಯಾವ ಕಾರಣಕ್ಕೆ ಕೂಗಿದ್ದಾನೆ ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆ ಮಾಡಲು ಪೊಲೀಸ್ ಕಸ್ಟಡಿಗೆ ಕೊಡಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡುತ್ತೇವೆ'' ಎಂದು ಡಿಸಿಪಿ ವಿವರಣೆ ನೀಡಿದರು.
ಇದನ್ನೂ ಓದಿ: ಬೆಳಗಾವಿ ಕೋರ್ಟ್ ಆವರಣದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪ, ವಿಚಾರಣಾಧೀನ ಕೈದಿಗೆ ಥಳಿತ