ಬೆಂಗಳೂರು: ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯಡಿ ಆರ್ಥಿಕ ಬೆಂಬಲ ಸಿಗುತ್ತಿದ್ದು, ಬ್ಯಾಂಕ್ಗಳಲ್ಲಿನ ಬಾಕಿ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಕ್ರಮವಹಿಸಬೇಕು ಎಂದು ಪಾಲಿಕೆ ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಿಎಂ ಸ್ವನಿಧಿಗೆ ಸಂಬಂಧಿಸಿದಂತೆ ಬ್ಯಾಂಕುಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳ ಜೊತೆ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಅಧಿನಿಯಮ, 2014 ಮತ್ತು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ, ಬೀದಿ ಬದಿ ವ್ಯಾಪಾರದ ನಿಯಂತ್ರಣ ಮತ್ತು ಪರವಾನಗಿ) ಯೋಜನೆ, 2020ರಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆ ಮುಖಾಂತರ ಬ್ಯಾಂಕುಗಳಿಂದ ಆರ್ಥಿಕ ಬೆಂಬಲ ನೀಡಲಾಗುತ್ತಿದೆ. ಈ ಕುರಿತು ಅಭಿಯಾನವನ್ನು ಸಹ ನಡೆಸಲಾಗಿದ್ದು, ಪಾಲಿಕೆ ವ್ಯಾಪ್ತಿಯ ಸುಮಾರು 75 ಬ್ಯಾಂಕ್ಗಳಲ್ಲಿ ಬಾಕಿಯಿರುವ 34,651 ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು ಎಂದು ಎಲ್ಲಾ ಬ್ಯಾಂಕುಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೀದಿ ಬದಿ ವ್ಯಾಪಾರಿಗಳು https://pmsvanidhi.mohua.gov.in/Homeಗೆ ಭೇಟಿ ನೀಡಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಅರ್ಹ ಬ್ಯಾಂಕ್ಗಳಿಂದ ಮೊದಲನೇ ಹಂತದಲ್ಲಿ 10 ಸಾವಿರ ರೂಪಾಯಿ, ಎರಡನೇ ಹಂತದಲ್ಲಿ 20 ಸಾವಿರ ರೂಪಾಯಿ ಮತ್ತು ಮೂರನೇ ಹಂತದಲ್ಲಿ 50 ಸಾವಿರ ರೂಪಾಯಿ ಅಂತೆ ಹಂತಹಂತವಾಗಿ ಕಿರು ಸಾಲ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ದೀನ್ ದಯಾಳ್ ಅಂತ್ಯೋದಯ ಯೋಜನೆ–ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ವತಿಯಿಂದ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ(ಪಿಎಂ ಸ್ವನಿಧಿ) ಯೋಜನೆಯನ್ನು ಜಾರಿಗೆ ತರಲಾಗಿದೆ. ಅದರಡಿ ಬೀದಿ ಬದಿ ವ್ಯಾಪಾರಿಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುವ ಉದ್ದೇಶದಿಂದ ಕಿರು ಸಾಲಗಳನ್ನು ನೀಡಲಾಗುತ್ತಿದೆ ಎಂದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪಿಎಂ ಸ್ವನಿಧಿ ಯೋಜನೆಯಿಂದ ಅನುಕೂಲ ಪಡೆದಿರುವ ವಿವರವನ್ನು ಪಿಎಂಎಸ್ ಡ್ಯಾಶ್‌ಬೋರ್ಡ್ ಲಿಂಕ್ https://pmsvanidhi.mohua.gov.in/Home/PMSDashboard ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಪಾಲಿಕೆಯ ಎಲ್ಲಾ ಎಂಟು ವಲಯಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವ್ಯಾಪಾರ ವಲಯಗಳನ್ನು ಗುರುತಿಸುವ ಕಾರ್ಯ ಚುರುಕಾಗಿ ನಡಯುತ್ತಿದೆ. ಅದರಂತೆ ಪಾಲಿಕೆಯ ಎಲ್ಲಾ 8 ವಲಯಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯನ್ನು ಕೈಗೊಂಡಿದ್ದು, ಇದುವರೆಗೆ ವಲಯವಾರು ಸುಮಾರು 20,600ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳನ್ನು ಸಮೀಕ್ಷೆ ಮೂಲಕ ಗುರುತಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಕಲ್ಯಾಣ ವಿಭಾಗದ ಸಹಾಯಕ ಆಯುಕ್ತ ನಾಗಭೂಷನ್, ವಿವಿಧ ಬ್ಯಾಂಕ್‌ಗಳ ಮುಖ್ಯಸ್ಥರು, ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೆ ಅನುಕೂಲ ಪಡೆದ ಬೀದಿ ವ್ಯಾಪಾರಿಗಳ ವಿವರ:
- ಅರ್ಹ ಅರ್ಜಿಗಳ ಸಂಖ್ಯೆ: 220257
- ಮಂಜೂರಾದ ಅರ್ಜಿಗಳ ಸಂಖ್ಯೆ: 173872
- ಸಾಲ ಪಡೆದ ಫಲಾನುಭವಿಗಳ ಸಂಖ್ಯೆ: 164088
ಇದನ್ನೂ ಓದಿ: ಬೆಂಗಳೂರಿನ ಬೀದಿನಾಯಿಗಳಿಗೆ ಮೈಕ್ರೋಚಿಪ್ ಅಳವಡಿಕೆ ಪ್ರಶ್ನಿಸಿ ಅರ್ಜಿ: ಕೇಂದ್ರ, ರಾಜ್ಯ ಮತ್ತು ಬಿಬಿಎಂಪಿಗೆ ನೋಟಿಸ್