ಹಾವೇರಿ : ನಮಗೆ ಅದ್ಭುತವಾದ ರೆಸ್ಪಾನ್ಸ್ ಸಿಗುತ್ತಿದೆ. ಜನ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಾಸನಕಟ್ಟೆಯಲ್ಲಿ ಬಹಿರಂಗ ಪ್ರಚಾರ ನಡೆಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಗಾಳಿ ಕರ್ನಾಟಕದ ಉದ್ದಗಲಕ್ಕೂ ಇದೆ. ನಟ ಸುದೀಪ್ ಸೇರಿದಂತೆ ಸ್ಟಾರ್ ಪ್ರಚಾರಕರಿಂದ ಬಿಜೆಪಿ ಪರ ಪ್ರಚಾರ ವಿಚಾರ ಕುರಿತಂತೆ ಮಾತನಾಡಿದ ಬೊಮ್ಮಾಯಿ, ಮಾತುಕತೆಯಾಗುತ್ತಿದೆ. ಯಾರೂ ಕನ್ಫರ್ಮ್ ಆಗಿಲ್ಲ. ಪಕ್ಷದಿಂದ ತೀರ್ಮಾನ ಆಗುತ್ತೆ ಎಂದು ತಿಳಿಸಿದರು.
ಹಲವು ಕ್ಷೇತ್ರಗಳಿಗೆ ಹಾಲಿ ಬಿಜೆಪಿ ಅಭ್ಯರ್ಥಿಗಳ ಬದಲಾವಣೆ ಒತ್ತಡ ವಿಚಾರ ಕುರಿತಂತೆ ಮಾತನಾಡಿದ ಅವರು, ಎಲ್ಲವೂ ಸರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕರಡಿ ಸಂಗಣ್ಣ ಅವರೊಂದಿಗೆ ಮಾತನಾಡಿದ್ದೇನೆ. ಅವರೂ ಒಪ್ಪಿಕೊಂಡಿದ್ದಾರೆ. ಇಂದು ಯಡಿಯೂರಪ್ಪ ದಾವಣಗೆರೆಗೆ ಹೋಗ್ತಾರೆ. ದಾವಣಗೆರೆಯದ್ದೂ ಸರಿಯಾಗಲಿದೆ. ಯಡಿಯೂರಪ್ಪ ನಾಳೆ ಬೆಳಗಾವಿಗೆ ಹೋಗ್ತಾರೆ. ಅಲ್ಲಿಯೂ ಕೂಡಾ ಸರಿಯಾಗುತ್ತೆ ಎಂದು ಬೊಮ್ಮಾಯಿ ಅವರು ತಿಳಿಸಿದರು.
ಶೋಭಾ ಕರಂದ್ಲಾಜೆಗೆ ಬೆಂಬಲ ನೀಡಲ್ಲ ಎಂಬ ಎಸ್. ಟಿ ಸೋಮಶೇಖರ್ ಹೇಳಿಕೆ ಕುರಿತು, ಇಂತಹ ಉಹಾಪೋಹಗಳಿಗೆ ನಾನು ಉತ್ತರ ಕೊಡಲ್ಲ. ಅವರವರ ನಿರ್ಣಯಕ್ಕೆ ಅವರೇ ಉತ್ತರ ಕೊಡ್ತಾರೆ ಎಂದರು. ಯಡಿಯೂರಪ್ಪ ಆಪ್ತರಿಗೆ ಸಿಎಂ ಸಿದ್ದರಾಮಯ್ಯ ಗಾಳ ಹಾಕಿದ ವಿಚಾರ ಕುರಿತಂತೆ ಮಾತನಾಡಿದ ಬೊಮ್ಮಾಯಿ, ಚುನಾವಣೆ ಯುದ್ದ ಭೂಮಿಯಲ್ಲಿ ಅವರವರ ರಣತಂತ್ರ ಅವರು ಮಾಡ್ತಾರೆ. ನಮ್ಮ ರಣತಂತ್ರ ನಾವು ಮಾಡುತ್ತೇವೆ ಎಂದು ಹೇಳಿದರು.
ಅಂತಿಮವಾಗಿ ಜನ ಮಾಲೀಕರು, ಜನರೇ ತೀರ್ಮಾನ ಮಾಡ್ತಾರೆ. ಬಿಜೆಪಿಯಲ್ಲಿ ಸೋತ ಐದು ಶಾಸಕರಿಗೆ ಟಿಕೆಟ್ ಮತ್ತು ಕಾಂಗ್ರೆಸ್ನಲ್ಲಿ ಸಚಿವರ ಪುತ್ರ, ಸಂಬಂಧಿಕರಿಗೆ ಟಿಕೆಟ್ ವಿಚಾರ ಕುರಿತಂತೆ ಮಾತನಾಡಿದ ಬೊಮ್ಮಾಯಿ, ನಮ್ಮ ಪಕ್ಷದಲ್ಲಿ ಗೆಲ್ಲುವವರಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿಸಿದರು.
ಮಾಸನಕಟ್ಟಿಯಲ್ಲಿ ತೆರೆದವಾಹನದಲ್ಲಿ ಬಸವರಾಜ್ ಬೊಮ್ಮಾಯಿ ಮತಯಾಚನೆ ಮಾಡಿದರು. ಗ್ರಾಮದ ಬಸ್ ನಿಲ್ದಾಣದಿಂದ ಆರಂಭವಾದ ಪ್ರಚಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಗ್ರಾಮದ ರಾಮಮಂದಿರ ಮುಂದಿನ ಆವರಣದಲ್ಲಿ ಬಸವರಾಜ್ ಬೊಮ್ಮಾಯಿ ಬಹಿರಂಗಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶಿವರಾಜ ಸಜ್ಜನರ್ ಮತ್ತು ಮನೋಹರ್ ತಹಶೀಲ್ದಾರ್ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ : ರಾಷ್ಟ್ರೀಯ ನಾಯಕರಿಂದ ಈಶ್ವರಪ್ಪನವರ ಮನವೊಲಿಕೆ ಕೆಲಸ: ಬೊಮ್ಮಾಯಿ