ಬೆಂಗಳೂರು: ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ಫೆಬ್ರವರಿ 16 ರಂದು ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪುಟ್ಟಣ್ಣ ಸೋಮವಾರ ನಾಮಪತ್ರ ಸಲ್ಲಿಸಿದರು.
ಶಾಂತಿನಗರದ ಎಂಟಿಸಿ ಬಸ್ ನಿಲ್ದಾಣದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಮಾಗಡಿ ಶಾಸಕ ಬಾಲಕೃಷ್ಣ ಮತ್ತಿತರರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ರೋಡ್ ಶೋ ನಡೆಸಿದರು. ರೋಡ್ ಶೋ ನಲ್ಲಿ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ವಿಧಾನಪರಿಷತ್ ಸದಸ್ಯರಾಗಿದ್ದ ಪುಟ್ಟಣ್ಣ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜೀನಾಮೆ ಸಲ್ಲಿಸಿದ್ದರು. ಇದೀಗ ಅವರಿಂದ ತೆರವಾಗಿರುವ ಸ್ಥಾನಕ್ಕೆ ಸ್ವತಃ ಪುಟ್ಟಣ್ಣ ಅವರೇ ಕಣಕ್ಕಿಳಿದಿದ್ದಾರೆ.
ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕ: ಈ ಸಂದರ್ಭದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರು ಮಾತನಾಡಿ, ಪುಟ್ಟಣ್ಣ ಅವರು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕರಾಗಿದ್ದಾರೆ. ಅವರು ಈ ಬಾರಿ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉನ್ನತ ಶಿಕ್ಷಣ ಸಚಿವ ಎಂ. ಸಿ. ಸುಧಾಕರ್ ಮಾತನಾಡಿ, ಈಗಾಗಲೇ ನಾಲ್ಕು ಬಾರಿ ಮೇಲ್ಮನೆಗೆ ಆಯ್ಕೆಯಾಗಿದ್ದ ಪುಟ್ಟಣ್ಣ ಅವರು ಶಿಕ್ಷಕರ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಿದೆ. ಶಿಕ್ಷಕರು ಮತ್ತು ಶಿಕ್ಷಣದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಪುಟ್ಟಣ್ಣ ಗೆಲುವು ನಿಶ್ಚಿತ ಅವರು ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಮಾತನಾಡಿ, ಶಿಕ್ಷಕರ ಸಮಸ್ಯೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸ್ಪಂದಿಸುತ್ತಿದ್ದು, ಮುಂದಿನ ದಿನಗಳಲ್ಲಿ ಶಿಕ್ಷಕ ಸಮುದಾಯದ ಪ್ರತಿಯೊಂದು ಬೇಡಿಕೆಗಳನ್ನು ಈಡೇರಿಸಲು ಆದ್ಯತೆ ನೀಡುತ್ತೇವೆ. ಶಿಕ್ಷಕ ಸಮುದಾಯ ಮತ್ತೊಮ್ಮೆ ತಮ್ಮನ್ನು ಬೆಂಬಲಿಸಲಿದೆ ಎಂದು ಹೇಳಿದರು.
ಶಾಸಕ ಎಚ್. ಸಿ. ಬಾಲಕೃಷ್ಣ ಮಾತನಾಡಿ, ಪುಟ್ಟಣ್ಣ ಸದಾ ಶಿಕ್ಷಕರ ಬಗ್ಗೆ ತುಡಿತ ಮತ್ತು ಕಾಳಜಿ ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಪುಟ್ಟಣ್ಣ ಅವರು ಶಾಸಕರಾಗಲು ಪ್ರಯತ್ನಿಸಿದರು. ಆದರೆ ಶಿಕ್ಷಕರ ಸೆಳೆತ ಅವರನ್ನು ಮತ್ತೆ ಅದೇ ಕ್ಷೇತ್ರಕ್ಕೆ ವಾಪಸ್ ಕರೆತಂದಿದೆ ಎಂದರು.
ಎನ್ಡಿಎ ಅಭ್ಯರ್ಥಿಯಾಗಿ ಎ ಪಿ ರಂಗನಾಥ್ ನಾಮಪತ್ರ ಸಲ್ಲಿಕೆ: ಪುಟ್ಟಣ್ಣ ಅವರಿಗೆ ಪ್ರತಿಸ್ಪರ್ಧಿಯಾಗಿ ಎನ್ಡಿಎ ಅಭ್ಯರ್ಥಿ(ಬಿಜೆಪಿ-ಜೆಡಿಎಸ್)ಯಾಗಿ ಎ ಪಿ ರಂಗನಾಥ್ ಅವರು ಸೋಮವಾರವೇ ನಾಮಪತ್ರ ಸಲ್ಲಿಸಿದರು. ಈ ವೇಳೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಮಾಜಿ ಡಿಸಿಎಂ ಅಶ್ವತ್ಥನಾರಾಯಣ್ ಸೇರಿದಂತೆ ಇತರರು ಸಾಥ್ ನೀಡಿದರು.
ಇದನ್ನೂಓದಿ:ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಎನ್ಡಿಎ ಅಭ್ಯರ್ಥಿ ಎ ಪಿ ರಂಗನಾಥ್ ನಾಮಪತ್ರ ಸಲ್ಲಿಕೆ