ಬೆಂಗಳೂರು: ಮಹರ್ಷಿ ಅರವಿಂದರು ತಮ್ಮ ಬರವಣಿಗೆಗಳಲ್ಲಿ ಭಾರತೀಯ ಜ್ಞಾನ ಪರಂಪರೆ ಕುರಿತು ಪ್ರಾಯೋಗಿಕವಾದ ವಿಮರ್ಶೆಯನ್ನು ನೀಡಿದ್ದಾರೆ. ಈ ದೇಶದ ಪರಂಪರೆಯು ಜ್ಞಾನದಾಹಿ ಪರಂಪರೆಯಾಗಿದ್ದು ಜ್ಞಾನಾರ್ಜನೆಯಲ್ಲಿ ಭಾರತೀಯರು ಹೊಸ ಸವಾಲುಗಳನ್ನು ಎದುರಿಸುವುದರ ಜೊತೆಗೆ ಹೊಸ ಮಾರ್ಗೋಪಾಯ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಸೋನಿಪತ್ ನ ರಿಷಿಹುಡ್ ವಿಶ್ವವಿದ್ಯಾಲಯದ ಮಾನವಿಕ ಅಧ್ಯಯನ ಕೇಂದ್ರಗಳ ನಿರ್ದೇಶಕ ಮತ್ತು ವಿದ್ವಾಂಸ ಡಾ. ಸಂಪದಾನಂದ ಮಿಶ್ರಾ ಹೇಳಿದರು.
ದಿ ಮಿಥಿಕ್ ಸೊಸೈಟಿ ಆಯೋಜಿಸಿದ್ದ ರಾವ್ ಬಹದ್ದೂರ್ ಆರ್ ನರಸಿಂಹಾಚಾರ್ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಭಾರತೀಯ ನಾಗರಿಕತೆ ಬುನಾದಿ, ಜ್ಞಾನದ ಅನ್ವೇಷಣೆ ಕುರಿತು ಮಾತನಾಡಿದ ಅವರು, ಈ ಜ್ಞಾನ ಪರಂಪರೆ ಕಾರಣದಿಂದ ಭಾರತೀಯ ಸಂಸ್ಕೃತಿಯು ಇಂದಿಗೂ ಸಹ ನಿತ್ಯ ನೂತನವಾಗಿದೆ. ಈ ಜ್ಞಾನ ಪರಂಪರೆಯು ವೈವಿಧ್ಯತೆ ಮತ್ತು ಬಹುತ್ವವನ್ನು ಸದಾಕಾಲ ಪ್ರತಿಪಾದಿಸುತ್ತ ಬಂದಿದೆ. ಧರ್ಮ ಮತ್ತು ಅಧರ್ಮಗಳ ನಡುವಿನ ಅಂತರವನ್ನು ನಿರಂತರವಾಗಿ ಸ್ಪಷ್ಟಪಡಿಸುತ್ತ ಸದಾಕಾಲ ಧರ್ಮ ಮಾರ್ಗವನ್ನೇ ಪೋಷಿಸುತ್ತ ಬಂದಿದೆ ಎಂದು ಹೇಳಿದರು.
ಹೊಸ ಶಿಕ್ಷಣ ನೀತಿಯಲ್ಲಿ ಭಾರತೀಯ ಪರಂಪರ ಪ್ರತಿಪಾದನೆ: ಭಾರತೀಯ ಚಿಂತಕರು ಮಾನವತಾವಾದವನ್ನು ಧರ್ಮ ಮಾರ್ಗದ ಮೂಲಕ ಪ್ರತಿಪಾದಿಸಿದರು. ಇದೇ ತತ್ವಜ್ಞಾನವನ್ನು ಗುರುಗಳು ಶಿಕ್ಷಣದ ಮೂಲಕ ತಮ್ಮ ವಿದ್ಯಾರ್ಥಿಗಳಿಗೆ ನೀಡುತ್ತ ಬಂದಿದ್ದಾರೆ. ಭಾರತೀಯ ಭಾಷೆಗಳು ಕೇವಲ ಒಂದು ಮಾಧ್ಯಮಿಕ ಸಾಧನಗಳಾಗಿರದೆ ಅವು ದೈವತ್ವವನ್ನು ಕೂಡ ಪ್ರತಿಪಾದಿಸುತ್ತಿವೆ. ಇತ್ತೀಚೆಗೆ ಜಾರಿಗೆ ತಂದಿರುವ 2020ರ ಹೊಸ ಶಿಕ್ಷಣ ನೀತಿಯು ಕೂಡ ಈ ಭಾರತೀಯ ಪರಂಪರೆಯನ್ನು ಹೆಚ್ಚು ಪ್ರತಿಪಾದಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಷ್ಟ್ರ ಧರ್ಮವನ್ನು ಪ್ರತಿಪಾದಿಸುವುದು ಕರ್ತವ್ಯ: ರಾಷ್ಟ್ರ ಧರ್ಮವನ್ನು ಪ್ರತಿಪಾದಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ, ಇಂತಹ ಉದಾತ್ತ ಮೌಲ್ಯಗಳನ್ನು ಶಿಕ್ಷಣದ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸುವುದು ಇಂದಿನ ಅಗತ್ಯವಿದೆ. ಆದರೆ ಇಂತಹ ಮೌಲ್ಯಗಳನ್ನು ಅಳವಡಿಸಿಕೊಂಡು ಮೌಲ್ಯಯುತವಾದ ಶಿಕ್ಷಣವನ್ನು ನೀಡುವ ಶಿಕ್ಷಕರ ಕೊರತೆ ಇಂದು ದೇಶದಲ್ಲಿ ಹೆಚ್ಚು ಕಾಣಲಾರಂಭಿಸಿದೆ ಎಂದು ಡಾ. ಸಂಪದಾನಂದ ಮಿಶ್ರಾ ಹೇಳಿದರು.
ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಿ ಮಿಥಿಕ್ ಸೊಸೈಟಿಯ ಕೋಶಾಧ್ಯಕ್ಷ ಕೆ.ಎನ್. ಹಿರಿಯಣ್ಣಯ್ಯ ಮಾತನಾಡಿ ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಸಂಸ್ಕೃತ ಭಾಷಾಧ್ಯಯನವನ್ನು ಜಾರಿಗೊಳಿಸುವುದು ಅತ್ಯವಶ್ಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಗೌರವ ಕಾರ್ಯದರ್ಶಿ ಎಸ್.ರವಿ, ದಿ ಮಿಥಿಕ್ ಸೊಸೈಟಿಯ ಉಪಾಧ್ಯಕ್ಷೆ ಡಾ. ವಿ. ಅನುರಾಧ, ಆಡಳಿತ ಮಂಡಳಿಯ ಸದಸ್ಯ ಎಂ.ಆರ್. ಪ್ರಸನ್ನ ಕುಮಾರ್ ಹಾಜರಿದ್ದರು.
ಇದನ್ನೂ ಓದಿ:ಮಾತೃ ಭಾಷೆ ಪ್ರೀತಿಸಿ, ಅನ್ಯಭಾಷೆ ಗೌರವಿಸಿ, ಹೆಚ್ಚು ಭಾಷೆ ಕಲಿಯಿರಿ : ಸ್ಪೀಕರ್ ಯು ಟಿ ಖಾದರ್