ಬೆಂಗಳೂರು: ತುಮಕೂರು ಲೋಕಸಭಾ ಚುನಾವಣಾ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಮನವೊಲಿಸಲು ಮಾಜಿ ಸಚಿವ ವಿ ಸೋಮಣ್ಣ ಮುಂದಾದರಾ ? ಎಂಬ ಪ್ರಶ್ನೆ ಬಿಜೆಪಿ ವಲಯದಲ್ಲಿ ಎದ್ದಿದೆ. ಡಾಲರ್ಸ್ ಕಾಲೊನಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸಕ್ಕೆ ಇಂದು ಸಂಜೆ ಮಾಜಿ ಸಚಿವ ವಿ.ಸೋಮಣ್ಣ ಅವರು ಪುತ್ರ ಅರುಣ್ ಜೊತೆ ಹಳೆಯ ಮುನಿಸು ಮರೆತು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಇದೀಗ ಭಾರಿ ಕುತೂಹಲ ಕೆರಳಿಸಿದೆ.
ಸೋಮಣ್ಣ ಆಗಮಮಿಸುವ ಮುನ್ನವೇ ತುಮಕೂರು ಜಿಲ್ಲೆ ಸಂಸದ ಬಸವರಾಜ್, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಎಸ್ವೈ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮತ್ತೊಂದು ಕಡೆ ಮಾಜಿ ಸಚಿವ ಮಾಧುಸ್ವಾಮಿ ಪುತ್ರ ಸುದೀಪ್ ಕೂಡ ಆಗಮಿಸಿದ್ದರು. ಸಂಸದ ಬಸವರಾಜ್ ನಿವೃತ್ತಿ ಘೋಷಣೆ ಹಿನ್ನೆಲೆ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿ ಹುಡುಕಾಟ ನಡೆಸಲಾಗುತ್ತಿದೆ. ತುಮಕೂರಿನಿಂದ ಸ್ಪರ್ಧೆ ಮಾಡುವ ಇಂಗಿತವನ್ನು ಸೋಮಣ್ಣ ಅವರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೈಕಮಾಂಡ್ ಬಳಿಯೂ ಚರ್ಚೆ ಮಾಡಿದ್ದಾರೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.
ಟಿಕೆಟ್ ಫೈನಲ್ ಆಗುವ ಸಾಧ್ಯತೆ ಹಿನ್ನೆಲೆ ಯಡಿಯೂರಪ್ಪ ಅವರ ಸಹಕಾರ ಕೋರಲು ಆಗಮಿಸಿದ ಸೋಮಣ್ಣ, ಹಳೆಯದನ್ನೆಲ್ಲ ಮರೆತು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ವಿ ಸೋಮಣ್ಣ ಅವರು, ನಾವು ಟಿಕೆಟ್ ಬಗ್ಗೆ ಚರ್ಚೆ ಮಾಡಿಲ್ಲ, ಸೌಹಾರ್ದಯುತವಾಗಿ ಮಾತನಾಡಿದ್ದೇವೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗಬೇಕು. ಈ ಹಿನ್ನೆಲೆ ಕರ್ನಾಟಕದಲ್ಲಿ 28 ಸ್ಥಾನಗಳನ್ನು ಗೆಲ್ಲಬೇಕು ಎನ್ನುವ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ. ನನ್ನ ಅಸಮಾಧಾನವನ್ನು ಈಗಾಗಲೇ ಹೊರಹಾಕಿದ್ದೇನೆ. ಅದು ನಿಮಗೂ (ಮಾಧ್ಯಮದವರಿಗೆ ) ಗೊತ್ತಿದೆ. ದೇಶಕ್ಕಿಂತ ನಾವ್ಯಾರೂ ದೊಡ್ಡವರಲ್ಲ ಎಂದು ಸೋಮಣ್ಣ ಇದೇ ವೇಳೆ ಹೇಳಿದರು.
ಈಗ ಎಲ್ಲವೂ ಮುಗಿದಿದೆ: ಯಡಿಯೂರಪ್ಪ ಮೇಲಿನ ಅಸಮಾಧಾನ ಎಲ್ಲವೂ ಮುಗಿದಿದೆ. ಮೇಲಿನವರು ಏನು ತೀರ್ಮಾನ ಮಾಡುತ್ತಾರೆ ಅದರ ಪ್ರಕಾರ ಆಗುತ್ತದೆ. ನಾನು ಯಾವತ್ತಾದರೂ ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂದು ಹೇಳಿದ್ದೀನಾ? ನಿಮ್ಮಲ್ಲಿ ಜಗಳಗಳಿಲ್ಲವಾ?, ಇವೆಲ್ಲ ಮನೆ ಜಗಳ. ಈಗ ಎಲ್ಲವೂ ಸರಿಹೋಗಿದೆ. ರಾಜಕೀಯದಲ್ಲಿ ನನಗೂ ಅನುಭವ ಇದೆ. ಜೆಡಿಎಸ್ಗೆ ತುಮಕೂರು ಬಿಟ್ಟು ಕೊಡಬೇಕು ಎಂಬ ಚರ್ಚೆ ಇಲ್ಲ. ಅವೆಲ್ಲಾ ಊಹಾಪೋಹಗಳು, ದಳಕ್ಕೆ ಕೊಡಬೇಕಾ, ಬೇರೆಯವರಿಗೆ ಕೊಡಬೇಕಾ ಎಂಬುದನ್ನು ವರಿಷ್ಠರು ತೀರ್ಮಾನ ಮಾಡ್ತಾರೆ ಎಂದು ಸೋಮಣ್ಣ ಹೇಳಿದರು.
ಇದನ್ನೂ ಓದಿ:ಪಕ್ಷದ ವರಿಷ್ಠರು ತೀರ್ಮಾನಿಸಿದರೆ ಶಿವಮೊಗ್ಗದಿಂದ ಸ್ಪರ್ಧಿಸುವೆ: ಗೀತಾ ಶಿವರಾಜಕುಮಾರ್