ಬೆಂಗಳೂರು: ರಾಜಧಾನಿ ಬೆಂಗಳೂರು ನಗರಕ್ಕೆ ಕಾವೇರಿ, ಕೊಳವೆಬಾವಿ ಹಾಗೂ ಶುದ್ದೀಕರಣ ಮಾಡಿರುವ ನೀರು ಪ್ರಸ್ತುತ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಮುಂದಿನ 2026ರ ಜುಲೈ ಅಂತ್ಯದ ವೇಳೆಗೆ ನಗರದಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ಲಭ್ಯವಿರಲಿದೆ ಎಂದು ಜಲ ಮಂಡಳಿ ಅಧ್ಯಕ್ಷ ರಾಮ ಪ್ರಸಾತ್ ಮನೋಹರ್ ಭರವಸೆ ನೀಡಿದ್ದಾರೆ.
ನಗರದ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಹಾ ಸಂಸ್ಥೆ (ಎಫ್ಕೆಸಿಸಿಐ) ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ಅವರು,2024 ರ ಜೂನ್ ಎರಡನೇ ವಾರದ ಅಂತ್ಯದ ವೇಳೆಗೆ ಕಾವೇರಿ 5ನೇ ಹಂತ ಪೂರ್ಣಗೊಳ್ಳಲಿದೆ. ಇದರಿಂದ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ನಗರದಲ್ಲಿ ಮಳೆ ನೀರು ಕೊಯ್ಲು ಪದ್ದತಿ ಮತ್ತು ಇಂಗು ಗುಂಡಿಗಳನ್ನು ತೆಗೆಯುವುದರೊಂದಿಗೆ ಕೊಳವೆ ಬಾವಿಗಳ ಮರು ಪೂರ್ಣಗೊಳ್ಳುವಂತೆ ಮಾಡಲಾಗುತ್ತಿದೆ. ಅಲ್ಲದೇ ಬಳಕೆ ಮಾಡಿದ ನೀರು ಚರಂಡಿ ಸೇರುವುದನ್ನು ತಡೆದು ಶುದ್ದೀಕರಣ ಮಾಡಿ ಕೈಗಾರಿಕೆಗಳ ಇತರ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ವಿವರಣೆ ನೀಡಿದರು.
ಅಷ್ಟೇ ಅಲ್ಲದೆ ನಗರದಲ್ಲಿ ನೀರು ಸಂರಕ್ಷಣೆಗೆ ಹಲವಾರು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಈ ಎಲ್ಲ ಯೋಜನೆಗಳು ಅನುಷ್ಠಾನಗೊಂಡು 2026 ಜುಲೈ ವೇಳೆಗೆ ನಗರದಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ನೀರು ಲಭ್ಯವಾಗುವಂತೆ ಮಾಡಲಾಗುವುದು ಎಂದು ಹೇಳಿದರು.
ಅಲ್ಲದೇ, ನೀರು ಉಳಿತಾಯ ಮತ್ತು ಸದ್ಬಳಕೆ, ಸಂಸ್ಕರಿಸಿದ ನೀರಿನ ಬಳಕೆ ಹಾಗೂ ಮಳೆ ನೀರಿನ ಸಮರ್ಪಕ ಬಳಕೆಯನ್ನು ಪ್ರೋತ್ಸಾಹಿಸುವ ಪಂಚ ಸೂತ್ರಗಳನ್ನು ಅಳವಡಿಸಿಕೊಂಡು ವಾಟರ್ ಸರ್‌ಪ್ಲಸ್ ಬೆಂಗಳೂರನ್ನಾಗಿಸಲು ಕೈಗಾರಿಕೋದ್ಯಮಿಗಳು ಕೈಜೋಡಿಸಬೇಕು ಎಂದು ಇದೇ ವೇಳೆ ಮನವಿ ಮಾಡಿದರು.
ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ಪೈಪ್‌ಲೈನ್ ಮೂಲಕ ಸಂಸ್ಕರಿಸಿದ ನೀರು ನೀಡಲು ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪೀಣ್ಯ ಕೈಗಾರಿಕಾ ಪ್ರದೇಶ ಹೊರತುಪಡಿಸಿ ಬೇರೆ ಪ್ರದೇಶಗಳಲ್ಲಿರುವ ಕೈಗಾರಿಕೆಗಳಿಗೆ ಟ್ಯಾಂಕರ್ ಮೂಲಕ ಕಡಿಮೆ ದರದಲ್ಲಿ ಸಂಸ್ಕರಿಸಿದ ನೀರನ್ನು ನೀಡಲು ಸಿದ್ದರಿದ್ದೇವೆ. ಜಲಮಂಡಳಿಯ ಬಳಿ ಸುಮಾರು 1200 ಎಂ.ಎಲ್.ಡಿ ಯಷ್ಟು ಸಂಸ್ಕರಿಸಿದ ನೀರು ಲಭ್ಯವಿದ್ದು ಇದರ ಸದ್ಬಳಕೆಯಿಂದ ಕಾವೇರಿ ನೀರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ಸಣ್ಣ ಕೈಗಾರಿಕೆಗಳಿಗೆ ಹಣದ ಉಳಿತಾಯವೂ ಆಗಲಿದೆ ಎಂದರು.
ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಮಾತನಾಡಿ, ಬೆಂಗಳೂರಿನಲ್ಲಿ ಎದುರಾಗಿದ್ದ ನೀರಿನ ಅಭಾವವನ್ನು ಸಮರ್ಪಕವಾಗಿ ಜಲಮಂಡಳಿ ನಿಭಾಯಿಸಿದೆ. ಇದರಲ್ಲಿ ಜಲಮಂಡಳಿ ಅಧ್ಯಕ್ಷರ ಪಾತ್ರವೂ ಹಿರಿದಾಗಿದೆ. ನೀರಿನ ಸದ್ಬಳಕೆ ಮತ್ತು ಉಳಿತಾಯ ಹಾಗೂ ಸಂಸ್ಕರಿಸಿದ ನೀರಿನ ಬಳಕೆಯನ್ನು ಪ್ರೋತ್ಸಾಹಿಸುವಂತಹ ಕ್ರಮಗಳನ್ನು ನಮ್ಮ ಕೈಗಾರಿಕಾ ಸಂಸ್ಥೆಯ ಸದಸ್ಯರುಗಳು ಅಳವಡಿಸಿಕೊಳ್ಳಲಿದ್ದಾರೆ. ಮಳೆ ನೀರಿನ ಕೋಯ್ಲು ಹಾಗೂ ಮಳೆ ನೀರಿನಿಂದ ಅಂತರ್ಜಲ ಮರುಪೂರಣದಂತಹ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಜಲಮಂಡಳಿಯ ಜೊತೆಯಲ್ಲಿ ಕೈಜೋಡಿಸಲಿದ್ದೇವೆ. ಬೆಂಗಳೂರು ಸುಸ್ಥಿರ ನಗರವನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ಸಹಕಾರವನ್ನು ನೀಡುವ ಮೂಲಕ ವಾಟರ್ ಸರ್‌ಪ್ಲಸ್ ಬೆಂಗಳೂರನ್ನಾಗಿಸಲು ನಮ್ಮ ಸಹಕಾರವೂ ಇರಲಿದೆ ಎಂದು ಹೇಳಿದರು.
ನೀರಿನ ಅಭಾವವನ್ನು ಸಮರ್ಪಕವಾಗಿ ನಿಭಾಯಿಸಿದ್ದಕ್ಕಾಗಿ ಎಫ್‌ಕೆಸಿಸಿಐ ವತಿಯಿಂದ ಜಲಮಂಡಳಿ ಅಧ್ಯಕ್ಷರನ್ನು ಅಭಿನಂದಿಸಲಾಯಿತು. ಸಂವಾದದಲ್ಲಿ ಎಫ್‌ಕೆಸಿಸಿಐ ಪದಾಧಿಕಾರಿಗಳಾದ ಹಿರಿಯ ಉಪಾಧ್ಯಕ್ಷ ಎಂ.ಜಿ ಬಾಲಕೃಷ್ಣ, ಉಪಾಧ್ಯಕ್ಷ ಉಮಾ ರೆಡ್ಡಿ, ನಿಕಟಪೂರ್ವ ಅಧ್ಯಕ್ಷ ಗೋಪಾಲ್ ರೆಡ್ಡಿ, ಸಾಯಿರಾಂ ಪ್ರಸಾದ್ ಸೇರಿದಂತೆ ಹಲವು ಸದಸ್ಯರುಗಳು ಉಪಸ್ಥಿತರಿದ್ದರು.