ರಾಯಚೂರು: ಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ದಲಿತ ಪರಸಂಘಟನೆಗಳು ಇಂದು ರಾಯಚೂರು ಬಂದ್‌ಗೆ ಕರೆ ನೀಡಿದೆ.
ವ್ಯಾಪಾರ - ವಹಿವಾಟು ಸ್ಥಗಿತ: ಅಂಗಡಿ - ಮುಂಗಟ್ಟುಗಳು ಸಹ ವ್ಯಾಪಾರ ಸ್ಥಗಿತಗೊಳಿಸುವ ಮೂಲಕ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ನಗರದ ಉಸ್ಮಾನಿಯ ತರಕಾರಿ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ.
ಪ್ರಯಾಣಿಕರಿಗೆ ಮುಟ್ಟಿದ ಬಂದ್ ಬಿಸಿ: ಬಂದ್ ಪರಿಣಾಮ ಬಸ್ ಸಂಚಾರ ಸಹ ಸ್ಥಗಿತಗೊಂಡಿದ್ದು, ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದೆ. ದೂರದೂರಿಗೆ ತೆರಳಬೇಕಿದ್ದ ಪ್ರಯಾಣಿಕರು ಬಸ್ ಸಂಚಾರ ಇಲ್ಲದೇ ಖಾಸಗಿ ವಾಹನಗಳಲ್ಲಿ ಸಂಚರಿಸುವ ದೃಶ್ಯ ಕಂಡು ಬಂತು.
ಇನ್ನು ನಗರದ ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಬಂದ್ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತವಾಗಿ ಬಿಗಿಬಂದೋ ಬಸ್ತ್ ನಿಯೋಜನೆ ಮಾಡಿದ್ಧಾರೆ.
ಈಗಾಗಲೇ ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿ ಕುರಿತು ಆಯಾ ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಿದೆ. ಆದರೆ, ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸುವುದಕ್ಕೆ ವಿಳಂಬ ನೀತಿ ಅನುಸರಿಸುವುದನ್ನು ಖಂಡಿಸಿ ಈ ಹೋರಾಟ ನಡೆಸಲಾಗುತ್ತಿದೆ. ಹಲವು ವರ್ಷಗಳಿಂದ ರಾಯಚೂರು ಜಿಲ್ಲೆಯಿಂದ ಒಳಮೀಸಲಾತಿ ಹೋರಾಟ ಆರಂಭಿಸಲಾಗಿತ್ತು.
ಅದರ ಫಲವಾಗಿ ಇದೀಗ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಿದೆ. ಆದರೆ, ಜಾರಿ ಮಾಡದ ಕಾಂಗ್ರೆಸ್ ಸರ್ಕಾರ ನಡೆಗೆ ದಲಿತ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಶಾಂತಿಯುತವಾಗಿ ಬಂದ್ ನಡೆಯುತ್ತಿದೆ.