ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಂ ಬಿಜೆಪಿ ಅಭ್ಯರ್ಥಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಸೋತಿದ್ದಾರೆ. ತುಕಾರಾಂ 87,629 ಮತಗಳ ಅಂತರದಿಂದ ಶ್ರೀರಾಮುಲು ವಿರುದ್ಧ ಜಯಭೇರಿ ಬಾರಿಸಿದ್ದಾರೆ. ತುಕಾರಾಂ ಗೆಲುವು ಸಾಧಿಸುತ್ತಿದ್ದಂತೆ ಕಂಪ್ಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ದೇವೇಂದ್ರಪ್ಪ ಗೆಲುವು ಸಾಧಿಸಿದ್ದರು. ಇವರು 6,16,388 ಮತಗಳನ್ನು ಪಡೆದು ಕಾಂಗ್ರೆಸ್ನ ಉಗ್ರಪ್ಪ ಅವರನ್ನು 55,707 ಮತಗಳ ಅಂತರದಿಂದ ಸೋಲಿಸಿದ್ದರು. ಉಗ್ರಪ್ಪಗೆ 5,60,681 ಮತಗಳು ಬಂದಿದ್ದವು.
ಈ ಕ್ಷೇತ್ರಕ್ಕೆ ಈವರೆಗೆ 19 ಚುನಾವಣೆಗಳು ನಡೆದಿವೆ. ಈ ಪೈಕಿ 15 ಬಾರಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಕಳೆದ 4 ಚುನಾವಣೆಗಳಲ್ಲಿ ಬಿಜೆಪಿ ಗೆದ್ದು ಬೀಗಿತ್ತು. 2004ರ ಬಳಿಕ ಈ ಕ್ಷೇತ್ರ ಬಿಜೆಪಿ ಬಾವುಟ ಹಾರಿಸಿತ್ತು. ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಮೀಸಲಾಗಿರುವ ಕ್ಷೇತ್ರದಲ್ಲಿ ಬಿಜೆಪಿ ಶ್ರೀರಾಮುಲು ಅವರನ್ನು ಕಣಕ್ಕಿಳಿಸುವ ಮೂಲಕ ಮತ್ತೆ ಅಧಿಪತ್ಯ ಸಾಧಿಸಲು ಪ್ರಯತ್ನಿಸಿತ್ತು. ಇತ್ತ ಕಾಂಗ್ರೆಸ್ ಕೂಡ ಮತ್ತೆ ಕ್ಷೇತ್ರದಲ್ಲಿ ತನ್ನ ಅಧಿಕಾರವನ್ನು ಇ.ತುಕಾರಾಂ ಮೂಲಕ ಮರಳಿ ಪಡೆಯಲು ಸಾಕಷ್ಟು ರಣತಂತ್ರ ರೂಪಿಸಿತ್ತು.
ಎರಡೂ ಪಕ್ಷಗಳು ಭರ್ಜರಿ ಚುನಾವಣಾ ಪ್ರಚಾರ ನಡೆಸಿದ್ದವು. ಕ್ಷೇತ್ರವನ್ನು ಗೆಲ್ಲಲು ಶತಪ್ರಯತ್ನ ನಡೆಸಿದ್ದವು. ಶ್ರೀರಾಮುಲು ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ 'ಲೋಕ' ಕದನಕ್ಕೆ ಇಳಿದಿದ್ದರು. ಹಾಲಿ ಸಂಸದರಾಗಿದ್ದ ದೇವೇಂದ್ರಪ್ಪ ಬದಲು ಶ್ರೀರಾಮುಲುಗೆ ಟಿಕೆಟ್ ನೀಡಲಾಗಿತ್ತು.
ಕ್ಷೇತ್ರ ಮಾಹಿತಿ: ಅವಿಭಜಿತ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ, ಕಂಪ್ಲಿ, ಬಳ್ಳಾರಿ ಗ್ರಾಮೀಣ, ಬಳ್ಳಾರಿ ನಗರ, ಸಂಡೂರು, ಕೂಡ್ಲಿಗಿ ವಿಧಾನಭಾ ಕ್ಷೇತ್ರಗಳು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಈ ಪೈಕಿ ಆರು ಕ್ಷೇತ್ರಗಳಲ್ಲಿ 6 ಕಾಂಗ್ರೆಸ್ ಶಾಸಕರಿದ್ದಾರೆ. 2 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಈ ಲೋಕಸಭಾ ವ್ಯಾಪ್ತಿಯಲ್ಲಿ 18,84,040 ಸಾಮಾನ್ಯ ಮತದಾರರು, 432 ಸೇವಾ ಮತದಾರರಿದ್ದಾರೆ. ಮೇ 7ರಂದು ನಡೆದ ಚುನಾವಣೆಯಲ್ಲಿ ಶೇಕಡಾ 72.35 ಮತದಾನವಾಗಿತ್ತು. ಕಳೆದ ಬಾರಿ ಇಲ್ಲಿ ಶೇ 69.76ರಷ್ಟು ಮತಪ್ರಮಾಣ ದಾಖಲಾಗಿತ್ತು.