ದಾವಣಗೆರೆ: ಶಾಸಕ ಶಿವರಾಮ್ ಹೆಬ್ಬಾರ್, ಎಸ್.ಟಿ.ಸೋಮಶೇಖರ್ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಕುರಿತು ಶಾಸಕ ಭೈರತಿ ಬಸವರಾಜ್ ಮಾತನಾಡಿದರು. "ಶಿವರಾಮ್ ಹೆಬ್ಬಾರ್, ಎಸ್.ಟಿ.ಸೋಮಶೇಖರ್ ತಮ್ಮ ಅನುಕೂಲಕ್ಕೆ ತಕ್ಕಂತೆ ವರ್ತಿಸುತ್ತಿದ್ದಾರೆ. ನಾನು ಇಬ್ಬರನ್ನೂ ಕರೆದು ಮಾತನಾಡಿದೆ. ಆದರೆ ಇಲ್ಲಿ ಸರಿ ಇಲ್ಲ ಎನ್ನುತ್ತಾರೆ, ಏನು ಮಾಡುವುದು?. ನಾನು ಹಾಗು ನನ್ನ ಸ್ನೇಹಿತ ಮುನಿರತ್ನ ತತ್ವ ಸಿದ್ಧಾಂತ ಒಪ್ಪಿ ಬಿಜೆಪಿಗೆ ಬಂದವರು. ನಾವು ಪಕ್ಷ ಬಿಡುವ ಕೆಲಸ ಮಾಡಲ್ಲ. ಆಶಾದಾಯಕವಾಗಿ ಕೆಲಸ ಮಾಡುತ್ತೇವೆ. ಬಿಜೆಪಿಯಲ್ಲಿ ಗೌರವ ಕೊಟ್ಟಿದ್ದಾರೆ. ಹೀಗಾಗಿ ಬೇರೆ ಪಾರ್ಟಿಗೆ ಹೋಗುವ ಅವಶ್ಯಕತೆ ಇಲ್ಲ" ಎಂದರು.
"ಲೋಕಸಭೆ ಚುನಾವಣೆಯ ಬಳಿಕ ಯಾರು ಎಲ್ಲಿಗೆ ಹೋಗುತ್ತಾರೆ ನೋಡೋಣ. ಸದ್ಯ 28 ಕ್ಷೇತ್ರ ಗೆಲ್ಲುವುದೇ ನಮ್ಮ ಗುರಿ. ಬಿಜೆಪಿಗೆ ಮತ ಹಾಕಲು ಜನ ಕಾಯುತ್ತಿದ್ದಾರೆ. ಎಂಪಿ ಚುನಾವಣೆಯಲ್ಲಿ ಗ್ಯಾರಂಟಿಗಳು ಕೊಚ್ಚಿ ಹೋಗುತ್ತವೆ. ಚುನಾವಣೆಯ ಬಳಿಕ ಗ್ಯಾರಂಟಿ ನಿಲ್ಲಿಸುವ ಕೆಲಸ ಆಗುತ್ತದೆ. ಮುಂದೆ ನಮ್ಮದೇ ಸರ್ಕಾರ ಬರುತ್ತದೆ. ಶಾಸಕರಿಗೆ 50 ಕೋಟಿ ರೂಪಾಯಿ ಆಫರ್ ಬಗ್ಗೆ ಸಿಎಂ ಯಾವ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ನಾಲ್ಕು ವರ್ಷ ಸರ್ಕಾರದ ಕಿವಿ ಹಿಂಡಿ ಮುಂದೆ ನಾವು ಅಧಿಕಾರಕ್ಕೆ ಬರುತ್ತೇವೆ" ಎಂದು ಹೇಳಿದರು.
ದಾವಣಗೆರೆಯಲ್ಲಿ ಯಾವುದೇ ಬಣಗಳಿಲ್ಲ: ದಾವಣಗೆರೆ ಬಿಜೆಪಿಯಲ್ಲಿ ಬಣ ರಾಜಕೀಯದ ಬಗ್ಗೆ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಮತ್ತೊಮ್ಮೆ ಬಿಜೆಪಿ ಗೆಲ್ಲಿಸುವ, ಎಲ್ಲವನ್ನೂ ಸರಿಪಡಿಸಿಕೊಳ್ಳುವ ಕೆಲಸ ಮಾಡುತ್ತೇವೆ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮುಂದೆ ಎಲ್ಲಾ ತಾಲೂಕುಗಳಲ್ಲಿ ಪ್ರವಾಸ ಮಾಡಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ದುಡಿಯುತ್ತೇವೆ. ದಾವಣಗೆರೆ ಜಿಲ್ಲೆಯಲ್ಲಿ ಯಾವುದೇ ಬಣ ಇಲ್ಲ. ಇರುವುದೊಂದೇ ಅದು ಬಿಜೆಪಿ ಬಣ. ವರಿಷ್ಠರು ಯಾರಿಗೆ ಟಿಕೆಟ್ ಕೊಟ್ಟರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಎಲ್ಲರನ್ನೂ ಕರೆದು ಸಭೆ ಮಾಡಿ ಸರಿದೂಗಿಸುವ ಕೆಲಸ ಮಾಡುವೆ. ನನಗೆ ಹಿಂದೆ ಉಸ್ತುವಾರಿ ಹುದ್ದೆ ನೀಡಿದಾಗ ಪ್ರಾಮಾಣಿಕವಾಗಿ ಕೆಲಸ ಮಾಡಿರುವ ತೃಪ್ತಿ ಇದೆ ಎಂದರುು ತಿಳಿಸಿದರು.
ಇದನ್ನೂ ಓದಿ: ಅನಂತ್ ಕುಮಾರ್ ಹೆಗಡೆ ಫುಲ್ ಅಲರ್ಟ್: ಖಾನಾಪುರದಲ್ಲಿ ಕಾರ್ಯಕರ್ತರ ಸಭೆ, ಸಂಸದರ ಕಾರಿಗೆ ರೈತರ ಮುತ್ತಿಗೆ ಯತ್ನ