ಬಾಗಲಕೋಟೆ: ''ಮೂಲ ಸೌಕರ್ಯಗಳಲ್ಲಿ ಒಂದಾದ ಸಾರಿಗೆ ಸಂಪರ್ಕ ಪ್ರಮುಖವಾಗಿದ್ದು, ವ್ಯಾಪಾರ ವಹಿವಾಟು ಪ್ರಯಾಣಕ್ಕಾಗಿ ಸುಸಜ್ಜಿತ ಹಾಗೂ ಸಮರ್ಪಕ ರೈಲು ಸಾರಿಗೆಯಿಂದ ದೇಶ ಪ್ರಗತಿ ಹೊಂದಲು ಸಾದ್ಯವಿದೆ'' ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.
ನಗರದ ರೈಲು ನಿಲ್ದಾಣ ಆವರಣದಲ್ಲಿ ಮಂಗಳವಾರ ವರ್ಚುವಲ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಾಗಲಕೋಟೆ-ಗದಗ ಜೋಡಿ ಮಾರ್ಗ ಹಾಗೂ ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಒಂದು ನಿಲ್ದಾಣ ಒಂದು ಉತ್ಪನ್ನ ಮಳಿಗೆಯನ್ನು ಲೋಕಾರ್ಪಣೆಗೊಳಿಸಿದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ''8,500 ಕೋಟಿ ರೂ.ಗಳಿಗೂ ಅಧಿಕ ವೆಚ್ಚದ ವಿವಿಧ ರೈಲ್ವೆ ಯೋಜನೆಗಳ ಕಾಮಗಾರಿಗಳು ದೇಶದ ಅಭಿವೃದ್ಧಿಗೆ ಪೂರಕವಾಗಿವೆ. ಪ್ರಧಾನಮಂತ್ರಿಗಳ ಅನುಭವ, ಕಲ್ಪನೆ ನಿರ್ಣಯ ಹಾಗೂ ನಿರಂತರ ಪ್ರಯತ್ನದಿಂದಾಗಿ ದೇಶವು ವಿಶ್ವಕ್ಕೆ ಮಾದರಿಯಾಗಿದೆ'' ಎಂದರು.

''ಬೆಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಬಾಗಲಕೋಟೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಣಜಿ- ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಬೆಳಗಾವಿ ಮೂಲಕ ಬಾಗಲಕೋಟೆ ಹುನಗುಂದ ಕ್ಷೇತ್ರಗಳಲ್ಲಿ ಹಾಯ್ದು ಹೋಗುತ್ತಿದ್ದು, ಇದರಿಂದ ನಮ್ಮ ಜಿಲ್ಲೆಗೂ ಕೂಡಾ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಇಂದು ಆರ್ಥಿಕವಾಗಿ ಸುಧಾರಣೆಗೊಳ್ಳಬೇಕಾದರೆ, ವ್ಯಾಪಾರ ವಹಿವಾಟು ಅಲ್ಪಸಮಯದಿಂದ ಅಧಿಕ ಲಾಭ ಹೊಂದಲು ಸಾರಿಗೆ ಅವಶ್ಯಕವಾಗಿದೆ. ರಸ್ತೆ, ರೈಲು ಸಾರಿಗೆ ಹಾಗೂ ವಿಮಾನಯಾನ ಇವೆಲ್ಲ ಪೂರಕ ಮಾಧ್ಯಮಗಳಾಗಿವೆ. 950 ಕೋಟಿ ರೂ.ಗಳ ವೆಚ್ಚದಲ್ಲಿ ಗದಗ- ಬಾಗಲಕೋಟೆ ಜೋಡಿ ಮಾರ್ಗಕ್ಕೆ ಚಾಲನೆ ದೊರೆತಿದೆ. ಅದರಲ್ಲಿ ಎರಡು ದೊಡ್ಡ ಸೇತುವೆಗಳು, 42 ಚಿಕ್ಕ ಸೇತುವೆಗಳು ಸೇರಿವೆ'' ಎಂದು ತಿಳಿಸಿದರು.

''ಕೇಂದ್ರ ಸರ್ಕಾರ ಸ್ಥಳೀಯತೆಗೆ ಧ್ವನಿಯಾಗುವ ದೃಷ್ಠಿಕೋನ ಇಟ್ಟುಕೊಂಡು ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜಿಸಿ ಮಾರುಕಟ್ಟೆ ಒದಗಿಸಲು ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯಡಿಯಲ್ಲಿ ಬಾಗಲಕೋಟೆ ಜಿಲ್ಲೆಯ ಪ್ರಸಿದ್ದ ಇಳಕಲ್ ಸೀರೆಗಳ ಮಳಿಗೆ ಪ್ರಾರಂಭಿಸಲಾಗಿದೆ. ಇಂತಹ ಮಳಿಗೆಯಿಂದ ಸ್ಥಳೀಯ ಕುಶಲಕರ್ಮಿಗಳಾದ ಕುಂಬಾರ, ನೇಕಾರರು ಸೇರಿದಂತೆ ಮುಂತಾದವರ ಜೀವನೋಪಾಯಕ್ಕಾಗಿ ವರ್ಧಿತ ಅವಕಾಶಗಳನ್ನು ಒದಗಿಸುವ ಗುರಿ ಹೊಂದಲಾಗಿದೆ'' ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಮಾತನಾಡಿ, ''ಬಾಗಲಕೋಟೆ- ಗದಗ ಜೋಡಿ ಮಾರ್ಗದಿಂದ ಜಿಲ್ಲೆಗೆ ಆರ್ಥಿಕ ಶಕ್ತಿ ಬಂದಂತಾಗಿದ್ದು, ಸ್ಥಳೀಯ ಐತಿಹಾಸಿಕ ಸ್ಥಳಗಳನ್ನು ಕೂಡಾ ಪರಿಚಯಿಸಿದಂತಾಗುತ್ತದೆ'' ಎಂದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಶಶಿಧರ ಕುರೇರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ರೈಲ್ವೆ ಅಧಿಕಾರಿ ಶ್ರೀನಿವಾಸ, ನಗರಸಭೆ ಸದಸ್ಯೆ ಡಾ.ರೇಖಾ ಕಲಬುರ್ಗಿ, ರೈಲ್ವೆ ಸಲಹಾ ಸಮಿತಿಯ ದಾಮೋದರ ರಾಟಿ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ: ಬೆಳಗಾವಿ ನೀರಾವರಿ ಇಲಾಖೆ ಎಂಡಿ ಎಳೆದಾಡಿದ ಮಹಿಳೆಯರು: ಪರಿಹಾರಕ್ಕಾಗಿ ಪಟ್ಟು