ಬಾಗಲಕೋಟೆ: ನಗರದ ಕಚೇರಿಯಲ್ಲಿ ಇಂದು ಶಾಸಕ ಎಚ್.ವೈ.ಮೇಟಿ ಅವರು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಿಟಿಡಿಎ) ಅಧ್ಯಕ್ಷ ಸ್ಥಾನ ಅಲಂಕರಿಸಿದರು. ಬಿಟಿಡಿಎ ಆವರಣದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, "ಕೃಷ್ಣಾ ಹಿನ್ನೀರಿನ ಮುಳುಗಡೆ ಸಂತ್ರಸ್ತರು ಸೂಕ್ತ ದಾಖಲೆಗಳನ್ನು ಒದಗಿಸಿದರೆ ನಿವೇಶನಗಳನ್ನು ಒದಗಿಸಲಾಗುವುದು. ಕಾನೂನಾತ್ಮಕವಾಗಿಯೇ ನಿವೇಶನ ತೆಗೆದುಕೊಳ್ಳಬೇಕು. ಇದರಲ್ಲಿ ಯಾವುದೇ ಏಜೆಂಟರುಗಳಿಗೆ ಅವಕಾಶವಿಲ್ಲ. ಅಧಿಕಾರಿಗಳು ವಿನಾಕಾರಣ ವಿಳಂಬ ಮಾಡಿದರೆ ನೇರವಾಗಿ ಬಂದು ನನ್ನನ್ನು ಕಾಣಬಹುದು" ಎಂದರು. ಇದೇ ವೇಳೆ, "ಯಾರಾದರೂ ಖೊಟ್ಟಿ(ನಕಲಿ) ದಾಖಲೆ ಸೃಷ್ಟಿಸಿ ನಿವೇಶನ ಪಡೆಯಲು ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸೂಕ್ತ ದಾಖಲೆಗಳಿಲ್ಲದೇ ನಿವೇಶನ ಸೇರಿದಂತೆ ಯಾವುದೇ ಕೆಲಸ ಮಾಡುವಂತಿಲ್ಲ" ಎಂದು ಏಜೆಂಟ್ ಹಾಗೂ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.
"ಬಿಟಿಡಿಎಯಿಂದ ನಡೆಯಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡಲಾಗುವುದು. 3ನೇ ಯೂನಿಟ್ದಲ್ಲಿ ಮೂಲ ಸೌಕರ್ಯ, ಸಂತ್ರಸ್ತರಿಗೆ ಪ್ರಾಮಾಣಿಕವಾಗಿ ನಿವೇಶನ ಹಂಚಿಕೆ ಮಾಡಲಾಗುವುದು" ಎಂದು ಅವರು ಭರವಸೆ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, "ನಗರದ ಅಭಿವೃದ್ಧಿ ಮಾಡುವ ಜವಾಬ್ದಾರಿ ದೊಡ್ಡದು, ಇದನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಬಾಗಲಕೋಟೆ ಮುಳುಗಡೆ ಪ್ರದೇಶವಾಗಿರುವುದರಿಂದ ಇಲ್ಲಿಯವರೆಗೆ ನನೆಗುದಿಗೆ ಬಿದ್ದಿರುವ ಕಾಮಗಾರಿಗಳು ಅನುಷ್ಠಾನಗೊಳ್ಳಬೇಕು. ನದಿ ನೀರಿನಿಂದ ಮುಳುಗಡೆಯಾಗಿ ಅನೇಕ ವರ್ಷಗಳ ಬಾಂಧವ್ಯ ಬಿಟ್ಟು ಸಂತ್ರಸ್ತರ ಜೀವನ ಚದುರಿಹೋಗಿದೆ. ಸಂತ್ರಸ್ತರಿಗೆ ನಿವೇಶನ, ಅವರ ಬೇಡಿಕೆಗಳನ್ನು ಈಡೇರಿಸುವ ಕೆಲಸ ತೀವ್ರಗತಿಯಲ್ಲಿ ಆಗಬೇಕು" ಎಂದು ಹೇಳಿದರು.
"ಶಾಸಕ ಮೇಟಿ ಅವರೊಂದಿಗೆ 40 ವರ್ಷದಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಅವರು ನನ್ನನ್ನು ಸೋಲಿಸಿದರು. ನಾವು ಅವರನ್ನು ಸೋಲಿಸಿದೆವು. ಹೀಗಿದ್ದರೂ ಅವರೊಬ್ಬ ಅಜಾತ ಶತ್ರು. ಎಲ್ಲರೊಂದಿಗೂ ಬೆರೆತು ಕೆಲಸ ಮಾಡುತ್ತಾರೆ" ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಮಾತನಾಡಿ, "ಬಿಟಿಡಿಸಿ ಅಧ್ಯಕ್ಷರಾಗಿ ಶಾಸಕ ಮೇಟಿ ಅವರು ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದು, ಪಟ್ಟಣದ ಜನರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ" ಎಂದರು.
ಮಾಜಿ ಸಚಿವ ಅಜಯಕುಮಾರ ಸರನಾಯಕ, ಜಿ.ಪಂ ಸಿಇಒ ಶಶಿಧರ ಕುರೇರ, ಎಸ್ಪಿ ಅಮರನಾಥ ರೆಡ್ಡಿ, ಆಲಮಟ್ಟಿ ಕೆಬಿಜೆ ಎನ್ ಎಲ್ ಎಂಡಿ ಶ್ರೀನಿವಾಸ, ಬಿಟಿಡಿಎ ಸಿಇ ಮನ್ಮಥಯ್ಯಸ್ವಾಮಿ, ಎಸಿ ಶ್ವೇತಾ ಬೀಡ್ಕರ, ಹೆಚ್ಚುವರಿ ವರಿಷ್ಠಾಧಿಕಾರಿ ಪ್ರಸನ್ ದೇಸಾಯಿ ಇದ್ದರು.
ಇದನ್ನೂಓದಿ: ಮೋದಿ ಗ್ಯಾರಂಟಿ ನಮ್ಮ ಗ್ಯಾರಂಟಿಯ ನಕಲು: ಸಚಿವೆ ಹೆಬ್ಬಾಳ್ಕರ್ ಲೇವಡಿ