ಶಿವಮೊಗ್ಗ: ರಾಜ್ಯಕ್ಕೆ ಬರ ಪರಿಹಾರ ಕೊಡಲ್ಲ ಎಂದು ಕೇಂದ್ರ ಸರ್ಕಾರ ಹೇಳಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಹಿಂದೆ ಯಡಿಯೂರಪ್ಪನವರು ಸಿಎಂ ಇದ್ದಾಗ ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಾಗಲೂ ಸಹ ಪರಿಹಾರ ನೀಡುವಲ್ಲಿ ತಡವಾಗಿದೆ. ತಡವಾಗಲು ಕೆಲವು ಮಾನದಂಡ ಇರುತ್ತದೆ. ಆದರೆ ಬಿಜೆಪಿ ಸರ್ಕಾರವು ಕೇಂದ್ರಕ್ಕೆ ಕಾಯದೆ ತನ್ನ ಖಜಾನೆಯಿಂದಲೇ ಪರಿಹಾರ ನೀಡಿತ್ತು ಎಂದು ರಾಜ್ಯಾಧ್ಯಕ್ಷರು ವಿವರಿಸಿದರು.
ಮುಂದುವರೆದು, "ಪ್ರಸ್ತುತ ರಾಜ್ಯ ಸರ್ಕಾರದ ಖಜಾನೆಯಲ್ಲಿ ಇಂದು ಹಣ ಇಲ್ಲ. ಜಖಾನೆ ಖಾಲಿಯಾಗಿದೆ. ರೈತರಿಗೆ ಪರಿಹಾರ ನೀಡಲು ಇವರ ಬಳಿ ಹಣ ಇಲ್ಲ. ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣ ಇಲ್ಲ. ಆದರೆ ಸಿಎಂರವರು ಅಲ್ಪ ಸಂಖ್ಯಾಂತರಿಗೆ 10 ಸಾವಿರ ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿ, 2 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಆದರೆ ಬರದ ವಿಚಾರದಲ್ಲಿ ಯಾಕೆ ಇಷ್ಟೊಂದು ಮೀನಾಮೇಷ ಎಣಿಸಿ, ರಾಜಕಾರಣ ಯಾಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಅಸಡ್ಡೆಯನ್ನು ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು".
"ಅಲ್ಪಸಂಖ್ಯಾಂತರ ಅಭಿವೃದ್ಧಿಗೆ ತೋರಿಸುವ ಉತ್ಸಾಹವನ್ನು ಸಂಕಷ್ಟದಲ್ಲಿ ಇರುವ ರೈತರಿಗೆ ತೋರಿಸಬಹುದಾಗಿತ್ತು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ನೆರೆ ಪರಿಹಾರ ಹಾಗೂ ತೋಟಗಾರಿಕೆಗಾಗಿ 24 ಸಾವಿರ ರೂ. ಹಣವನ್ನು ರೈತರಿಗೆ ನೀಡಿದ್ದರು. ಭತ್ತ ಬೆಳೆದ ರೈತರಿಗೆ ಹೆಕ್ಟೇರ್ಗೆ 14 ಸಾವಿರ ರೂ. ನೀಡಿದ್ದರು. ಮಳೆಯಿಂದ ಮನೆ ಕಳೆದುಕೊಂಡಿದ್ದ ಬಡವರ ಮನೆ ನಿರ್ಮಾಣಕ್ಕಾಗಿ 4 ಲಕ್ಷ ರೂ. ನೀಡಿದ್ದರು. 800 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು ಸಹ ರಾಜ್ಯದ ಕಾಂಗ್ರೆಸ್ ಸರ್ಕಾರದ ಸಿಎಂ ಅವರು ಕೇಂದ್ರದ ಹಣಕ್ಕಾಗಿ ಕಾದು ನಿಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದೀರಿ" ಎಂದು ಟೀಕಿಸಿದರು.
"ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಚೆನ್ನಾಗಿದೆ. ಮೈತ್ರಿಯಲ್ಲಿ ಸರಿ ಇಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷ ಪಿತೂರಿ ನಡೆಸುತ್ತಿದೆ. ಕೊಲೆ ಪ್ರಕರಣ ನಡೆದರೆ ಅದು ವೈಯಕ್ತಿಕ ಕಾರಣ ಅನ್ನುತ್ತಿರಿ. ಯಾದಗಿರಿಯಲ್ಲಿ ಹಿಂದು ಯುವಕನ ಬರ್ಬರ ಹತ್ಯೆಯಾಗಿದೆ. ಇದು ವೈಯಕ್ತಿಕ ಕಾರಣ ಎನ್ನುತ್ತಿರಿ. ಎಲ್ಲವನ್ನು ಸಹ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡರೆ, ಅಲ್ಪ ಸಂಖ್ಯಾಂತರಿಗೆ ನೋವಾಗುತ್ತದೆ ಎಂದುಕೊಂಡರೆ, ಕಾನೂನು ಸುವ್ಯವಸ್ಥೆಯನ್ನು ಯಾರು ಕಾಪಾಡುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಸಿಎಂ ಆದವರು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಇದನ್ನು ರಾಜ್ಯದ ಜನತೆ ನಿರೀಕ್ಷೆ ಮಾಡುತ್ತಿದ್ದಾರೆ" ಎಂದು ವಿಜಯೇಂದ್ರ ಟಾಂಗ್ ನೀಡಿದರು.
ಇದನ್ನೂ ಓದಿ: ಮೋದಿ ಅಲೆ, ಗ್ಯಾರಂಟಿ ವಿಶ್ವಾಸ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಗ್ರೌಂಡ್ ರಿಪೋರ್ಟ್ - Ground Report