ಶಿವಮೊಗ್ಗ: ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ಇಂದು ಕುಟುಂಬಸಮೇತರಾಗಿ ಆಗಮಿಸಿ ಮತದಾನ ಮಾಡಿದರು. ಶಿಕಾರಿಪುರದ ಮಾಳೇರಕೇರಿಯ ತಮ್ಮ ನಿವಾಸದಿಂದ ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳೊಂದಿಗೆ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು.
ಇದಕ್ಕೂ ಮುನ್ನ ಹುಚ್ಚರಾಯ ಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ರಾಯರ ದರ್ಶನ ಪಡೆದರು. ನಂತರ ಶಿಕಾರಿಪುರದ ಆಡಳಿತ ಭವನದ ಬೂತ್ ನಂಬರ್ 137 ಮತಗಟ್ಟೆಯಲ್ಲಿ ವೋಟ್ ಹಾಕಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, "ರಾಘವೇಂದ್ರ ಈ ಬಾರಿ ಎರಡೂವರೆ ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಎರಡನೇ ಹಂತದ 14 ಕ್ಷೇತ್ರಗಳಲ್ಲೂ ನಾವು ಗೆಲುವು ಸಾಧಿಸಲಿದ್ದೇವೆ. ಮೊದಲ ಹಂತದ 14 ಕ್ಷೇತ್ರಗಳಲ್ಲಿ ಒಂದೆರಡು ಕಡೆ ಸಮಸ್ಯೆ ಇದೆ. ಆದರೂ ಮೋದಿ ಅವರನ್ನು 3ನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಮಾಡಲು ರಾಜ್ಯದಿಂದ 25ರಿಂದ 26 ಕ್ಷೇತ್ರಗಳನ್ನು ಗೆದ್ದು ಅವರಿಗೆ ಅರ್ಪಿಸಲಿದ್ದೇವೆ" ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿ, "ಮತದಾರರು ಮೋದಿ ಅವರೊಂದಿಗಿದ್ದು ಅವರ ಕೈ ಬಲಪಡಿಸುತ್ತಾರೆ. ಕಳೆದ ಬಾರಿ 25 ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿಯೂ ಆ ಎಲ್ಲಾ ಕ್ಷೇತ್ರಗಳನ್ನೂ ಉಳಿಸಿಕೊಳ್ಳುತ್ತೇವೆ. ಜನರ ಉತ್ಸಾಹ ಬಿಜೆಪಿ ಪರ ಇದೆ. 28 ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದು ಫಲಿತಾಂಶ ನಮ್ಮ ಪರವಾಗಿ ಬರಲಿದೆ. ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು ಎಂಬುದು ಜನರ ಆಶಯ. ಕಾಂಗ್ರೆಸ್ನವರು ಗ್ಯಾರಂಟಿ ಯೋಜನೆಗಳನ್ನಿನ್ನಿಟ್ಟುಕೊಂಡು 20 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ ಜೂನ್ 4ರಂದು ಅವರಿಗೆ ಆಘಾತವಾಗಲಿದೆ" ಎಂದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಮತದಾರರ ಸೆಳೆಯಲು ವಿಶೇಷ ಮತಗಟ್ಟೆಗಳ ಸ್ಥಾಪನೆ - Special Polling Booths