ಶಿವಮೊಗ್ಗ: "ಈಡಿಗ ಸಮಾಜಕ್ಕೆ ನಾನು ಸದಾ ಋಣಿಯಾಗಿದ್ದೇನೆ. ಈ ಸಮಾಜದ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ" ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು. ಸಾಗರದ ಬಿ.ಹೆಚ್.ರಸ್ತೆಯ ಗಣಪತಿ ಕೆರೆ ಎದುರಿನ ಮೈದಾನದಲ್ಲಿ ಮಂಗಳವಾರ ನಡೆದ 'ಶಕ್ತಿ ಸಾಗರ ಸಂಗಮ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾರ್ಯಕ್ರಮಕ್ಕೆ ಧರ್ಮಸ್ಥಳದ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಅವದೂತ ವಿನಯ ಗುರೂಜಿ, ಪ್ರಣವಾನಂದ ಸ್ವಾಮೀಜಿ ದೀಪ ಬೆಳಗಿಸಿ ಚಾಲನೆ ನೀಡಿದರು. ಈಡಿಗ, ಧೀವರ, ನಾಮಧಾರಿ, ಬಿಲ್ಲವರು ಸೇರಿದಂತೆ 26 ಪಂಗಡದ ಮುಖಂಡರು ಯಡಿಯೂರಪ್ಪನವರಿಗೆ ಹಾರ, ಶಾಲು, ನೇಗಿಲು ಹಾಗೂ ನಾರಾಯಣ ಗುರುಗಳ ಪುತ್ಥಳಿ ನೀಡಿ ಗೌರವಿಸಿದರು.
"ಈಡಿಗ, ನಾಮಧಾರಿ, ಬಿಲ್ಲವ ಸೇರಿದಂತೆ 26 ಪಂಗಡದವರು ನನಗೆ ಬಹಳ ಆತ್ಮೀಯತೆ, ಪ್ರೀತಿಯಿಂದ ಸನ್ಮಾನ ಮಾಡಿದ್ದೀರಿ. ನನ್ನ ಜೀವನದ ಕೊನೆಯತನಕ ರಾಜ್ಯದ ಜನತೆಗಾಗಿ ದುಡಿಯುತ್ತೇನೆ. ಈಡಿಗ ಸಮಾಜದ ಬಗ್ಗೆ ಯೋಚಿಸಿದಾಗಲೆಲ್ಲ ನಮ್ಮ ಕಣ್ಣ ಮುಂದೆ ಬರುವುದು ಡಾ.ರಾಜ್ ಕುಮಾರ್ ಕುಟುಂಬ" ಎಂದು ಯಡಿಯೂರಪ್ಪ ಹೇಳಿದರು.
ಮುಂದುವರೆದು ಮಾತನಾಡಿ, "ವಿಶ್ವಕ್ಕೆ ಸಮಾನತೆಯ ಬದುಕಿನ ಸಂದೇಶ ನೀಡಿದವರು ನಾರಾಯಣ ಗುರುಗಳು. ಒಬ್ಬನೇ ದೇವರು ಎಂದು ಅನುಸರಿಸಿದರೆ ನಮ್ಮ ದೇಶವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ" ಎಂದರು.
ಇದೇ ವೇಳೆ, "ಸಿಗಂದೂರಿಗೆ ಏಷ್ಯಾದ ಎರಡನೇ ಅತಿ ದೊಡ್ಡ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ" ಎಂದು ತಿಳಿಸಿದರು.
ಮುಂದಿನ ಚುನಾವಣೆಯಲ್ಲೂ ಆಶೀರ್ವದಿಸಿ-ಬಿ.ವೈ.ರಾಘವೇಂದ್ರ: ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, "ನಾರಾಯಣ ಗುರುಗಳ ವಂಶಸ್ಥರು, ಕೋಟಿ ಚನ್ನಯ್ಯನನ್ನು ಆರಾಧಿಸುವವರು ಭಾಗವಹಿಸಿದ್ದಾರೆ. ನಮ್ಮ ತಂದೆಯನ್ನು ಬೆಳೆಸಿದವರು ನೀವು. ತತ್ವರಹಿತ ರಾಜಕೀಯವನ್ನು ಯಾರೂ ಮಾಡಬಾರದು. ಯಡಿಯೂರಪ್ಪನವರಿಗೂ, ನನಗೂ ಧೀವರ ಸೇವೆ ಸಲ್ಲಿಸುವ ಅವಕಾಶ ಮಾಡಿಕೊಟ್ಟಿದ್ದು ನಮ್ಮ ಪುಣ್ಯ. ನಮ್ಮ ಲೋಕಸಭೆ ಕ್ಷೇತ್ರಕ್ಕೆ ಸಾಕಷ್ಟು ಅನುಕೂಲ ಮಾಡಿಕೊಡಲಾಗಿದೆ. ಶರಾವತಿ ಅಣೆಕಟ್ಟು ನಿರ್ಮಾಣದಿಂದ ನೀವು ಸಂತ್ರಸ್ತರಾಗಿದ್ದೀರಿ. ನಿಮಗೆ ಹಕ್ಕುಪತ್ರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಿಗಂದೂರು ಸೇತುವೆ 450 ಕೋಟಿ ರೂ.ನಲ್ಲಿ ನಿರ್ಮಾಣವಾಗುತ್ತಿದೆ. ಅದಕ್ಕೆ ಬೇಕಾದ ತಿರುವು ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ" ಎಂದು ಹೇಳಿದರು.
ರಾಘವೇಂದ್ರರನ್ನು ಗೆಲ್ಲಿಸುತ್ತೇವೆ-ಕೋಟಾ ಶ್ರೀನಿವಾಸ ಪೂಜಾರಿ: ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, "ಕರ್ನಾಟಕದಲ್ಲಿ ಕಡುಬಡವರನ್ನು ಉದ್ಧಾರ ಮಾಡಿದ್ಧು ಯಡಿಯೂರಪ್ಪನವರು. ಸೇಂದಿ ತೆಗೆಯಲು ಹೋಗಿ ಕೆಳಗೆ ಬಿದ್ದವರಿಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿದಾಗ, ಅವರು ಇನ್ನೂ ಅದೇ ದಾರಿಯಲ್ಲಿ ಸಾಗದೆ, ಸೇಂದಿ ತೆಗೆಯುವವರ ಮಕ್ಕಳೂ ಡಾಕ್ಟರ್, ಇಂಜಿನಿಯರ್ ಆಗಬೇಕೆಂದು ಕರೆ ನೀಡಿದರು. ನಾನು ಧಾರ್ಮಿಕ ದತ್ತಿ ಇಲಾಖೆ ಸಚಿವನಾದಾಗ ನಾರಾಯಣ ಗುರುಮಂದಿರವನ್ನು ಧಾರ್ಮಿಕ ದತ್ತಿ ಇಲಾಖೆಗೆ ಸೇರ್ಪಡೆ ಮಾಡಿದೆ. ನಾರಾಯಣ ಗುರುಗಳ ಬಗ್ಗೆ ನಮಗೆ ನಂಬಿಕೆ ಇದೆ. ಗಾಂಧೀಜಿಯವರು ನಾರಾಯಣ ಗುರುಗಳನ್ನು ಆಧುನಿಕ ಬ್ರಹ್ಮ ಎಂದು ಹೇಳಿದ್ದಾರೆ. ನಮ್ಮ ಸಮಾಜಕ್ಕೆ ಶಕ್ತಿ ತುಂಬಿದವರು ಯಡಿಯೂರಪ್ಪನವರು. ಕೊಲ್ಲೂರಿನ ಕೂಡಚಾದ್ರಿ ಬೆಟ್ಟಕ್ಕೆ ರೂಪ್ ವೇ ಮಾಡಿದ್ದು ಸಂಸದ ರಾಘವೇಂದ್ರರವರು. ಸಿಗಂದೂರು ದೇವಾಲಯಕ್ಕೆ ಸೇತುವೆ ನಿರ್ಮಾಣ ಮಾಡಿದ್ದಾರೆ. ಹಿಂದೆ ಶ್ರೀಲಂಕಾಕ್ಕೆ ಶ್ರೀರಾಮ ಸೇತುವೆ ಕಟ್ಟಿದರೆ, ಸಿಗಂದೂರಿಗೆ ಸೇತುವೆ ಕಟ್ಟಿದ್ದು ಯಡಿಯೂರಪ್ಪ ಮತ್ತು ರಾಘವೇಂದ್ರ. ನಾವು ಈಡಿಗರು, ನಾಮಧಾರಿಗಳು ಒಂದಾಗಿ ರಾಘವೇಂದ್ರರನ್ನು ಗೆಲ್ಲಿಸಿಕೊಡುತ್ತೇವೆ" ಎಂದು ಭರವಸೆ ಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಲಪ್ಪ ಹರತಾಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕ ಸುನೀಲ್ ಸೇರಿದಂತೆ ಇನ್ನೂ ಅನೇಕರಿದ್ದರು.
ಇದನ್ನೂ ಓದಿ: ರಾಜಕೀಯ ತರಬೇತಿ ಕೇಂದ್ರ ಆರಂಭಿಸಲು ಚಿಂತನೆ: ಸ್ಪೀಕರ್ ಯು.ಟಿ.ಖಾದರ್