ಶಿವಮೊಗ್ಗ: ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.10ರಿಂದ 20 ತಾರೀಖಿನವರೆಗೆ ಯೋಗೋತ್ಸವ ಎಂದು ಆಚರಿಸುತ್ತಿದ್ದೇವೆ. ಈಗಾಗಲೇ 'ಮಹಿಳಾ ಸಬಲೀಕರಣಕ್ಕಾಗಿ ಯೋಗ' ಎಂಬ ಪರಿಕಲ್ಪನೆ ಇಟ್ಟುಕೊಂಡು ಶಿವಮೊಗ್ಗ ಜಿಲ್ಲೆಯಾದ್ಯಂತ ವಿವಿಧ ಹಾಸ್ಟೆಲ್‌ಗಳಲ್ಲಿ ಯೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿದ್ದೇವೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಿಂಗರಾಜ್ ಹಿಂಡಸಕಟ್ಟಿ ತಿಳಿಸಿದರು.
ನಗರದಲ್ಲಿ 'ಈಟಿವಿ ಭಾರತ್' ಜೊತೆ ಮಾತನಾಡಿದ ಅವರು, ಮಹಿಳಾ ಸಬಲೀಕರಣಕ್ಕಾಗಿ ಯೋಗ ಥೀಮ್ ಇರುವುದರಿಂದ ಹೆಣ್ಣು ಮಕ್ಕಳ ಹೆಚ್ಚಾಗಿ ಕಾಡುತ್ತಿರುವ ಥೈರಾಯ್ಡ್ ಮತ್ತು ಪಿಸಿಒಡಿ ಸಮಸ್ಯೆಯನ್ನು ಕಡಿಮೆ ಮಾಡಲು ಮ್ಯಾನೇಜ್ಮೆಂಟ್ ಆಫ್ ಪಿಸಿಒಡಿ ವಿತ್ ಯೋಗ ಆ್ಯಂಡ್ ಆಯುರ್ವೇದ ಎಂಬ ವಿಷಯ ಇಟ್ಟುಕೊಂಡು ಪ್ರತಿಯೊಂದು ಮಹಿಳಾ ಹಾಸ್ಟೆಲ್ನಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ 15 ನಿಮಿಷ ವಿಶೇಷ ಉಪನ್ಯಾಸ ಕೊಡಿಸಿ ಯೋಗ ಕಾರ್ಯಕ್ರಮ ನಡೆಸಿದ್ದೇವೆ ಎಂದರು.
ಜೂ.21ನೇ ತಾರೀಖು ಯೋಗ ಫಾರ್ ಸೆಲ್ಫ್ ಆ್ಯಂಡ್ ಸೊಸೈಟಿ ಎಂಬ ಥೀಮ್‌ನಡಿ ನೆಹರು ಕ್ರೀಡಾಂಗಣದಲ್ಲಿ ಯೋಗ ಕಾರ್ಯಕ್ರಮ ಆಯೋಜಿಸಿದ್ದೇವೆ. ಅಲ್ಲಿ ಸುಮಾರು 800 ರಿಂದ 1000 ಜನರನ್ನು ಸೇರಿಸುವ ಗುರಿ ಇಟ್ಟುಕೊಂಡಿದ್ದೇವೆ. ಕಾರ್ಯಕ್ರಮದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಅಂದು 100 ಜನ ಕೆಎಸ್ಆರ್ಪಿ ಪೊಲೀಸರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.