ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದನ್ನು ಖಂಡಿಸಿ ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಿಂದ ತಾಲೂಕು ಆಡಳಿತ ಭವನದ ಕಡೆ ಹೊರಟ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸುತ್ತಿದ್ದಂತೆ ತಡೆದ ಪೊಲೀಸರು, ಹಲವರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು. ಬಿಎಸ್‌ವೈ ನಿವಾಸಕ್ಕೆ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.
ಮೈಸೂರಿನಲ್ಲೂ ರಾಜ್ಯಪಾಲರ ವಿರುದ್ಧ ಪ್ರತಿಭಟನೆ: ಮುಡಾ ವಿಚಾರವಾಗಿ ಸಿಎಂ ಸಿದ್ದರಾಮಯ್ಯರಿಗೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ನಂಜನಗೂಡು ರಸ್ತೆಯ ಎಪಿಎಂಸಿ ರಿಂಗ್ ರಸ್ತೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಎಂ.ಕೆ.ಸೋಮಶೇಖರ್ ಮಾತನಾಡಿ, "ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಮಂತ್ರಿ ಅಮಿತ್ ಶಾ ಅವರು ಈ ದೇಶದ ಮಹಾನ್ ಸರ್ವಾಧಿಕಾರಿಗಳು. ಇವರನ್ನು ಬಿಟ್ಟು ಯಾರೂ ಸಹ ಬೆಳೆಯಬಾರದು ಮತ್ತು ವಿರೋಧಿಸಬಾರದು, ಪ್ರಶ್ನಿಸಬಾರದು ಎಂಬ ಮನಸ್ಥಿತಿ ಹೊಂದಿರುವಂತವರು" ಎಂದು ಕಿಡಿಕಾರಿದರು.
ಸಿಎಂ ಹೇಮಂತ್ ಸೊರೇನ್, ಅರವಿಂದ್ ಕೇಜ್ರಿವಾಲ್‌ರನ್ನು ಇ.ಡಿ ಮೂಲಕ ಬಂಧಿಸಿದ್ದಾರೆ. ಕರ್ನಾಟಕದಲ್ಲೂ ಸಹ ಪದ್ಮರಾಜ್ ಎಂಬ ಅಧಿಕಾರಿಯನ್ನು ಇ.ಡಿಯವರು ಬಂಧಿಸಿ ಅವರಿಂದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರ ಹೆಸರುಗಳನ್ನು ಹೇಳಿಸಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಿದರು.
ಹಿಂದೆಯೂ ಸಹ ಆಪರೇಷನ್ ಕಮಲದ ಮೂಲಕ ಸಚಿವರು, ಶಾಸಕರನ್ನು ಕೊಂಡುಕೊಳ್ಳುವ ಮೂಲಕ ಸರ್ಕಾರ ಅಸ್ಥಿರಗೊಳಿಸುವ ಹುನ್ನಾರವನ್ನು ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾದಲ್ಲಿ ಮಾಡಿದ್ದರು. ಇದೇ ರೀತಿ ಮುಂದುವರೆದರೆ ರಾಜ್ಯದಲ್ಲಿ ಜನ ದಂಗೆ ಹೇಳುತ್ತಾರೆ. ದೇಶದಲ್ಲೆಡೆ ಬಾಂಗ್ಲಾದೇಶದಲ್ಲಿ ಹೇಗೆ ಜನ ದಂಗೆ ಎದ್ದಿದ್ದಾರೋ ಅದೇ ಪರಿಸ್ಥಿತಿ ಭಾರತದಲ್ಲೂ ಉಂಟಾಗುವ ಕಾಲ ಬಹಳ ದೂರವೇನಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸೋಮಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಸವರಾಜು, ಕಾಂಗ್ರೆಸ್ ಮುಖಂಡರಾದ ರವಿಶಂಕರ್, ನಗರ ಪಾಲಿಕೆ ಮಾಜಿ ಸದಸ್ಯ ಜೆ.ಗೋಪಿ, ಎಂ.ಸುನಿಲ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.