ಬೆಂಗಳೂರು : ಪ್ರತಿಪಕ್ಷಗಳ ಮುಡಾ ಗದ್ದಲದ ಹಿನ್ನೆಲೆ ಮಳೆಗಾಲದ ಅಧಿವೇಶನವನ್ನು ಒಂದು ದಿನ ಮೊಟಕು ಗೊಳಿಸಲಾಯಿತು. ಮುಡಾ ಹಗರಣ ಸಂಬಂಧ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ ಮುಂದುವರಿಸಿದ ಬಿಜೆಪಿ - ಜೆಡಿಎಸ್ ಸದಸ್ಯರು ಗುರುವಾರವೂ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮುಡಾ ಚರ್ಚೆಗೆ ಅವಕಾಶ ನೀಡುವಂತೆ ಸ್ಪೀಕರ್ ಅವರನ್ನು ಆಗ್ರಹಿಸಿದರು.
ಇತ್ತ ಸ್ಪೀಕರ್ ನಿಯಮ ಮೀರಿ ಮುಡಾ ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಮನವಿ ನಿರಾಕರಿಸಿದರು. ಗದ್ದಲದ ಮಧ್ಯೆ ವಿಧಾನಸಭೆಯಲ್ಲಿ ಐದು ಮಸೂದೆಗಳನ್ನು ಅಂಗೀಕಾರ ಮಾಡಲಾಯಿತು. ಇತ್ತ ಸ್ಪೀಕರ್ ಅವಕಾಶ ನೀಡದ ಕಾರಣ ಪ್ರತಿಪಕ್ಷಕ್ಕೆ ಮುಡಾ ಹಗರಣದ ಚರ್ಚೆ ಸಾಧ್ಯವಾಗಲಿಲ್ಲ. ಪ್ರತಿಪಕ್ಷಗಳು ಮುಡಾ ಹಗರಣದ ಮೇಲಿನ ಚರ್ಚೆಗೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದ ಕಾರಣ ಸ್ಪೀಕರ್ ಯು ಟಿ ಖಾದರ್ ವಿಧಾನಸಭೆ ಕಲಾಪವನ್ನು ಒಂದು ದಿನ ಮೊಟಕುಗೊಳಿಸಿದರು.
ಸ್ಪೀಕರ್ಗೆ ಹೂ ನೀಡಿದ ಯತ್ನಾಳ್ : ಭೋಜನ ವಿರಾಮದ ಬಳಿಕ ಕಲಾಪ ಆರಂಭವಾಗುತ್ತಿದ್ದ ಹಾಗೆ ಬಿಜೆಪಿ - ಜೆಡಿಎಸ್ ಸದಸ್ಯರು ಮುಡಾ ಪ್ರತಿಭಟನೆ ಮುಂದುವರಿಸಿದರು. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಪ್ರತಿಪಕ್ಷಗಳು ಪಟ್ಟು ಹಿಡಿದರು. ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಸ್ಪೀಕರ್ ಯು. ಟಿ ಖಾದರ್ ಗೆ ಹೂ ಕೊಟ್ಟು ಚರ್ಚೆಗೆ ಅವಕಾಶ ಕೋರಿದರು.
ಜನರ ಬಗ್ಗೆ ಚರ್ಚೆ ಮಾಡೋಕೆ ನೀವು ಕೇಳ್ತಿಲ್ಲ. ಮಳೆಗಾಲದ ಬಗ್ಗೆ ನೀವು ಚರ್ಚೆ ಮಾಡ್ತಿಲ್ಲ. ನಿಮ್ಮ ಮೇಲೆ ನನಗೆ ಸಹಾನುಭೂತಿ ಇದೆ. ಕೆಟ್ಟ ಸಂಪ್ರದಾಯ ತರಲಿಕ್ಕೆ ನನ್ನ ಕೈಯಲ್ಲಿ ಸಾಧ್ಯವಿಲ್ಲ. ನಿಯಮದ ವಿರುದ್ಧ ಚರ್ಚೆಗೆ ತೆಗೆದುಕೊಂಡಿದ್ದೀರಿ ಅನ್ನೋ ಕಳಂಕಕ್ಕೆ ಗುರಿಯಾಗೋದಿಲ್ಲ. ರಾಜ್ಯದ ಜನರ ಬಗ್ಗೆ ಬೇಕಿದ್ದರೆ ನೀವು ಚರ್ಚೆ ಮಾಡಿ ಎಂದು ಪ್ರತಿಪಕ್ಷಗಳ ಸದಸ್ಯರಿಗೆ ಸ್ಪೀಕರ್ ಸೂಚನೆ ನೀಡಿದರು. ಸ್ಪೀಕರ್ ಮಾತಿಗೂ ಕಿವಿಗೊಡದೇ ಸರ್ಕಾರದ ವಿರುದ್ಧ ಬಿಜೆಪಿ ಜೆಡಿಎಸ್ ಸದಸ್ಯರು ಘೋಷಣೆ ಕೂಗಿದರು.
ಗದ್ದಲದ ನಡುವೆಯೇ ಆರ್. ಅಶೋಕ್ ಭಾಷಣ: ಇತ್ತ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮುಡಾ ಸಂಬಂಧ ತಮ್ಮ ಪಾಡಿಗೆ ಭಾಷಣ ಆರಂಭಿಸಿದರು. ಒಂದು ಕಡೆಯಲ್ಲಿ ಪ್ರಶ್ನೋತ್ತರ ಅವಧಿ ನಡೆದರೆ, ಮತ್ತೊಂದು ಕಡೆಯಲ್ಲಿ ಆರ್ ಅಶೋಕ್ ಮುಡಾ ವಿಚಾರವಾಗಿ ಭಾಷಣ ಮಾಡಿದರು.
ಮುಡಾ ಬಗ್ಗೆ ಚರ್ಚೆಗೆ ಅವಕಾಶ ಕೊಟ್ಟಿದ್ದೀರಿ ಎಂದು ಭಾವಿಸಿ ನಾನು ಮಾತಾಡ್ತೀನಿ ಎಂದು ಮಾತು ಶುರು ಮಾಡಿದ ಆರ್. ಅಶೋಕ್, ಮುಡಾದ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣ, ಮುಡಾದಲ್ಲಿ ಬದಲಿ ನಿವೇಶನಗಳಲ್ಲಿ ಕರ್ಮಕಾಂಡ ನಡೆದಿದೆ. ಕಾನೂನು ಬಾಹಿರವಾಗಿ 40 ಕೋಟಿಗೂ ಅಧಿಕ ಹಣದಲ್ಲಿ ಸಿಎಂ ಪತ್ನಿಗೆ ಸೈಟ್ ಕೊಡಿಸಿದ್ದಾರೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ರಾಜಕೀಯ ಪ್ರಭಾವ ಬಳಸಿ ತಮ್ಮ ಪತ್ನಿ ಹೆಸರಿಗೆ ನಿವೇಶನ ಪಡೆದಿದ್ದಾರೆ ಎಂದು ದೂರಿದರು. ಈ ವೇಳೆ, ಪ್ರತಿಪಕ್ಷಗಳು ಸಿಎಂ ಸಿದ್ದರಾಮಯ್ಯರ ರಾಜೀನಾಮೆಗೆ, ಸ್ಪೀಕರ್ ನಡೆ ಕಾಂಗ್ರೆಸ್ ಕಡೆ ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಎಂಟೇ ದಿನಕ್ಕೆ ಅಧಿವೇಶನ ಮೊಟಕು : ವಿಧಾನಸಭೆ ಕಲಾಪ 37 ತಾಸುಗಳು ನಡೆದಿದ್ದು, 12 ಮಸೂದೆಗಳು ಅಂಗೀಕಾರವಾಯಿತು. ನಿಯಮ 60ರ ಅಡಿ ನೀಡಿದ್ದ 9 ಸೂಚನೆಗಳ ಪೈಕಿ 8ನ್ನು ನಿಯಮ 69ಕ್ಕೆ ಪರಿವರ್ತಿಸಲಾಗಿದ್ದು, 1 ಸೂಚನೆಯನ್ನು ತಿರಸ್ಕರಿಸಲಾಗಿದೆ, ಎರಡು ಸೂಚನೆಗಳನ್ನು ಚರ್ಚಿಸಲಾಗಿದೆ.
ನಿಯಮ 69 ರ ಅಡಿ ಒಟ್ಟು 14 ಸೂಚನೆಗಳನ್ನು ಸ್ವೀಕರಿಸಲಾಗಿದೆ. ಈ ಅವಧಿಯಲ್ಲಿ ಒಟ್ಟು 16 ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಗಿದೆ. ಒಟ್ಟು 2,370 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 135 ಪ್ರಶ್ನೆಗಳ ಪೈಕಿ 117 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಲಿಖಿತ ಮೂಲಕ ಉತ್ತರಿಸುವ 1902 ಪ್ರಶ್ನೆಗಳ ಪೈಕಿ 1438 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ.
ನಿಯಮ 351 ರ ಅಡಿ ಸ್ವೀಕೃತವಾದ 154 ಸೂಚನೆಗಳ ಪೈಕಿ 72 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ಗಮನ ಸೆಳೆಯುವ 323 ಸೂಚನೆಗಳ ಪೈಕಿ 170 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ಶೂನ್ಯ ವೇಳೆಯಲ್ಲಿ 3 ಸೂಚನೆಗಳನ್ನು ಚರ್ಚಿಸಲಾಗಿದೆ. ರಾಜ್ಯಕ್ಕೆ ಹಂಚಿಕೆ ಮಾಡಬೇಕಾದ ಲೋಕಸಭೆ ಸ್ಥಾನಗಳ ಮತ್ತು ಪ್ರತಿ ರಾಜ್ಯದ ವಿಧಾನಸಭೆಗೆ ನಿಗದಿಪಡಿಸಬೇಕಾದ ಸ್ಥಾನಗಳ ಸಂಖ್ಯೆಯನ್ನು 1971ರ ಜನಗಣತಿಯನ್ನಾಧರಿಸಿ ನಿರ್ಧರಿಸಬೇಕೆಂದು ಒತ್ತಾಯಿಸಿ, ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ ಮಾಡಲಾಯಿತು.
ಒಂದು ರಾಷ್ಟ್ರ ಒಂದು ಚುನಾವಣೆ ಪ್ರಸ್ತಾವ ಭಾರತದ ಪ್ರಜಾಸತ್ತಾತ್ಮಕ ಮತ್ತು ಒಕ್ಕೂಟ ವ್ಯವಸ್ಥೆಗೆ ಅಪಾಯವನ್ನುಂಟು ಮಾಡುವುದರಿಂದ ಈ ಪ್ರಸ್ತಾವವನ್ನು ಅನುಷ್ಠಾನಗೊಳಿಸಬಾರದು ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು. ನೀಟ್ ಪರೀಕ್ಷಾ ವ್ಯವಸ್ಥೆಯಲ್ಲಿ ಆಗುತ್ತಿರುವ ಅಕ್ರಮಗಳನ್ನು ಪರಿಗಣಿಸಿ ರಾಷ್ಟ್ರೀಯ ಮಟ್ಟದಲ್ಲಿ ನೀಟ್ ಪರೀಕ್ಷೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ನಿರ್ಣಯ ಅಂಗೀಕರಿಸಲಾಯಿತು.