ಬಳ್ಳಾರಿ : ಸಂಡೂರು ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕರಾಂ ಅವರು 9649 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ 93,616 ಮತ್ತು ಬಿಜೆಪಿ 83967 ಮತ ಪಡೆದಿದಿದ್ದು, ಅನ್ನಪೂರ್ಣ ತುಕಾರಾಂ 9649 ಮತಗಳ ಅಂತರದಿಂದ ಗೆದ್ದಿದ್ದಾರೆ.
ಈ ಕುರಿತು ಸಂಡೂರಿನಲ್ಲಿ ಪರಾಜಿತ ಅಭ್ಯರ್ಥಿ ಬಂಗಾರು ಹನುಮಂತು ಮಾತನಾಡಿ, ಚುನಾವಣೆಯಲ್ಲಿ ಹಣಬಲ ಕೆಲಸ ಮಾಡಿದೆ. ತುಕಾರಾಂ ಅವರು ಚುನಾವಣೆಯಲ್ಲಿ ನಿಂತಿಲ್ಲ. ಸ್ವತಃ ಸಿದ್ದರಾಮಯ್ಯ ಅವರು ಇಲ್ಲಿ ಬಂದು ಚುನಾವಣೆ ಮಾಡಿದ್ರು. ಹಾಗಾಗಿ ನಾನಿವತ್ತು ಸೋತರೂ ಕೂಡ ಜನ ಕೊಟ್ಟಿರುವ ತೀರ್ಪನ್ನ ಸ್ವೀಕಾರ ಮಾಡುತ್ತೇನೆ. ಈ ಚುನಾವಣೆಯಲ್ಲಿ ಅಧರ್ಮ ಗೆದ್ದಿದೆ. ಹಣಬಲದ ಮುಖಾಂತರ ಅವರು ಚುನಾವಣೆ ಗೆದ್ದಿದ್ದಾರೆ. ಈ ಸೋಲಿನ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ. ಯಾರ ಮೇಲೂ ಇದನ್ನು ಹೊರಿಸಲ್ಲ ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ, ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ನಮ್ಮ ಜನಾರ್ಧನ ರೆಡ್ಡಿ ಎಲ್ಲರಿಗೂ ನಾನು ಸಂಡೂರು ವಿಧಾನಸಭಾ ಕ್ಷೇತ್ರ ಗೆದ್ದು ತರುತ್ತೇನೆ ಎಂದು ಮಾತು ಕೊಟ್ಟಿದ್ದೆ. ಆದರೆ ಗೆಲ್ಲಲಾಗಿಲ್ಲ ಎಂದು ಅವರಲ್ಲಿ ನಾನು ಕ್ಷಮೆಯನ್ನ ಕೇಳುತ್ತೇನೆ ಎಂದು ಹೇಳಿದ್ದಾರೆ.
ಸಚಿವ ಶಿವರಾಜ ತಂಗಡಗಿ ಉಸ್ತುವಾರಿ ಹೊತ್ತಿದ್ದ ಪ್ರದೇಶ ಸೇರಿ, ಸಚಿವರು ಇದ್ದ ಪ್ರದೇಶದಲ್ಲಿ ನಮಗೆ ಹಿನ್ನಡೆ ಆಗಿದೆ. ಅಂಕಿ-ಅಂಶಗಳ ಪ್ರಕಾರ ಈ ಸೋಲು ನಮಗೆ ಸೋಲೆ ಅಲ್ಲ, ಚುನಾವಣೆ ಹತ್ತಿರ ಇದ್ದಾಗ ಎಲ್ಲ ಮಹಿಳೆಯರ ಖಾತೆಗೆ 2 ಸಾವಿರ ರೂ. ಹಣ ಹಾಕಿದರು. ವೋಟಿಗೆ 2 ಸಾವಿರ ಕೊಟ್ಟು ಮತಗಳನ್ನು ಖರೀದಿ ಮಾಡಿದರು. 2028ರಲ್ಲಿ ಸಂಡೂರಲ್ಲಿ ಬಿಜೆಪಿ ಬಾವುಟ ಹಾರಿಸುತ್ತೇವೆ. ನಾನು ಅಲ್ಲಿಯೇ ಮನೆ ಮಾಡಿ ಜನರ ಜತೆ ಇರುತ್ತೇನೆ. 2028ರಲ್ಲಿ ಯಾರೇ ಅಭ್ಯರ್ಥಿ ಆಗಲಿ ಒಗ್ಗಟ್ಟಿನಿಂದ ತುಕಾರಾಂ, ಸಂತೋಷ ಲಾಡ್ ಅವರನ್ನು ಸೋಲಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಉಪಚುನಾವಣೆ ಮತ ಎಣಿಕೆ: ಮೂರು ಕ್ಷೇತ್ರಗಳಲ್ಲಿ ಕೈ ಮೇಲು; ನಿಖಿಲ್, ಬೊಮ್ಮಾಯಿಗೆ ಹಿನ್ನಡೆ