ಬೆಂಗಳೂರು: ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು ಇಂದು ನಿವೃತ್ತಿಯಾಗುತ್ತಿದ್ದು, ಅವರ ಸೇವೆಯನ್ನು ಪರಿಗಣಿಸಿ 'ಕರ್ನಾಟಕ ರತ್ನ ಪ್ರಶಸ್ತಿ' ನೀಡಿ ಅವರನ್ನು ಗೌರವಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.
'ಟ್ರೀಟ್ಮೆಂಟ್ ಫಸ್ಟ್, ಪೇಮೆಂಟ್ ನೆಕ್ಸ್ಟ್' ಎಂಬ ಪರಿಕಲ್ಪನೆಯನ್ನಿಟ್ಟುಕೊಂಡು ಸಾವಿರಾರು ಬಡ ರೋಗಿಗಳಿಗೆ ಚಿಕಿತ್ಸೆ ಕೊಟ್ಟ ಡಾ.ಮಂಜುನಾಥ್ ಅವರು ಬಡವರ ಪಾಲಿನ ಧನ್ವಂತರಿ ಎಂದರೆ ಅತಿಶಯೋಕ್ತಿಯಲ್ಲ. ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವ ಕಾಲದಲ್ಲಿ ಯಾವುದೇ ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಬಡವರಿಗೆ ಕೈಗೆಟಕುವ ದರದಲ್ಲಿ ಉತ್ಕೃಷ್ಟ ಆರೋಗ್ಯ ಸೇವೆ ನೀಡುವ ಮಟ್ಟಕ್ಕೆ ಒಂದು ಸರ್ಕಾರಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಅನನ್ಯ ಸಾಧನೆ ಮಾಡಿದ ಡಾ.ಸಿ.ಎನ್.ಮಂಜುನಾಥ್ ಕರ್ನಾಟಕದ ಹೆಮ್ಮೆಯ ಸುಪುತ್ರ ಎಂದು ಆರ್.ಅಶೋಕ್ ಬಣ್ಣಿಸಿದ್ದಾರೆ.
"ಡಾ.ಸಿ.ಎನ್.ಮಂಜುನಾಥ್ ಅವರ ಸಾಧನೆ ಗುರುತಿಸಿ, ಗೌರವಿಸಲು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಹನುಮಧ್ವಜ ಇಳಿಸಿದಂತೆ ಕುರ್ಚಿಯಿಂದ ನಿಮ್ಮನ್ನೂ ಇಳಿಸಲಿದ್ದಾರೆ: "ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಇಳಿಸಿದ ಮೇಲೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಈಗ ಧಿಡೀರನೆ ರಾಷ್ಟ್ರಧ್ವಜದ ಮೇಲೆ ಎಲ್ಲಿಲ್ಲದ ಭಕ್ತಿ ಉಕ್ಕಿ ಹರಿಯುತ್ತಿದೆ. 2011ರಲ್ಲಿ ಗಣರಾಜ್ಯೋತ್ಸವದ ದಿನದಂದು ಜಮ್ಮು ಕಾಶ್ಮೀರದ ಶ್ರೀನಗರದ ಲಾಲ್ ಚೌಕ್ನಲ್ಲಿ ರಾಷ್ಟ್ರಧ್ವಜ ಹಾರಿಸಲು ಬಿಜೆಪಿ ಏಕ್ತಾ ಯಾತ್ರೆ ಕೈಗೊಂಡಿದ್ದಾಗ ರಾಷ್ಟ್ರಧ್ವಜ ಹಾರಿಸಲು ಬಿಡದೆ ಬಿಜೆಪಿ ನಾಯಕರನ್ನು ಬಂಧಿಸಿದ್ದು ಇದೇ ಕಾಂಗ್ರೆಸ್ ಪಕ್ಷದ ಸರ್ಕಾರ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಾಡುವುದನ್ನೂ ತಡೆದಿದ್ದು ಕೂಡ ಇದೇ ಕಾಂಗ್ರೆಸ್. ಬೆಂಗಳೂರಿನ ಚಾಮರಾಜಪೇಟೆಯಲ್ಲಿ 75 ವರ್ಷಗಳ ನಂತರ ರಾಷ್ಟ್ರಧ್ವಜ ಹಾರಿಸಲು ಅವಕಾಶ ನೀಡಿದ್ದು ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಾನು ಕಂದಾಯ ಸಚಿವನಾಗಿದ್ದಾಗ" ಎಂದು ಆರ್.ಅಶೋಕ್ ಟೀಕಿಸಿದ್ದಾರೆ.
"ಕೇಸರಿ, ಕುಂಕುಮ ಕಂಡರೆ ನನಗೆ ಭಯ ಅಂತ ಮುಚ್ಚುಮರೆಯಿಲ್ಲದೆ ಹೇಳಿಕೊಂಡಿರುವ ತಮಗೆ ಹನುಮ ಧ್ವಜದ ಮೇಲಿನ ನಿಮ್ಮ ದ್ವೇಷವನ್ನು ಮರೆಮಾಚಲು ರಾಷ್ಟ್ರಧ್ವಜದ ಮುಖವಾಡ ಹಾಕಿಕೊಳ್ಳುವ ಅಗತ್ಯ ಏನಿದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ? ನಮ್ಮ ರಾಷ್ಟ್ರಧ್ವಜದಲ್ಲೇ ಕೇಸರಿ ಬಣ್ಣವಿದೆ. ಕೇಸರಿ ಬಣ್ಣ ಹಿಂದೂ ಧರ್ಮದ ಸಾಧು-ಸಂತರು, ಸನ್ಯಾಸಿಗಳು, ಮಠಾಧಿಪತಿಗಳು ಧರಿಸುವ ಬಣ್ಣ. ಹಿಂದೂಗಳ ಪರಮ ಪವಿತ್ರ ಲಾಂಛನ ಕೇಸರಿ ಬಣ್ಣ. ತ್ಯಾಗದ ಸಂಕೇತವಾದ ಕೇಸರಿ ಬಣ್ಣ ಶಾಶ್ವತವೆ ಹೊರತು ತಮ್ಮ ಅಧಿಕಾರವಲ್ಲ. ತಾವು ಹನುಮ ಧ್ವಜವನ್ನು ಇಳಿಸಿದ ರೀತಿಯಲ್ಲೇ ಹಿಂದೂಗಳು ತಮ್ಮನ್ನು ಕುರ್ಚಿಯಿಂದ ಇಳಿಸುವ ದಿನ ಬಹಳ ದೂರವಿಲ್ಲ" ಎಂದಿದ್ದಾರೆ.
ತೆರಿಗೆ ಹಣ ಪೋಲು: "'ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ' ಎಂಬಂತೆ ರೈತರ ಬರ ಪರಿಹಾರಕ್ಕೆ, ಅಭಿವೃದ್ಧಿಗೆ ಹಣವಿಲ್ಲದಿರುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ 73 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಜನರ ತೆರಿಗೆ ಹಣ ಪೋಲು ಮಾಡುತ್ತಿದೆ' ಎಂದು ಟೀಕಿಸಿದರು.
"135 ಶಾಸಕರಲ್ಲಿ 34 ಸಚಿವರು, ನಿಗಮ ಮಂಡಳಿಗಳ ಅಧ್ಯಕ್ಷರು, ಸಲಹೆಗಾರರು, ದೆಹಲಿ ಪ್ರತಿನಿಧಿ ಸೇರಿದಂತೆ ಈಗ ಒಟ್ಟು 73 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ ಕಲ್ಪಿಸಲಾಗಿದ್ದು, ಗ್ಯಾರೆಂಟಿ ಜಾರಿ ಸಮಿತಿಯ 10 ಮಂದಿಗೂ ಸಂಪುಟ ದರ್ಜೆ ಸ್ಥಾನ ನೀಡಿದರೆ 80ಕ್ಕೂ ಹೆಚ್ಚು ಸಂಪುಟ ದರ್ಜೆ ಸ್ಥಾನಮಾನ ಕಲ್ಲಿಸಿದಂತಾಗುತ್ತದೆ. ಅತೃಪ್ತ ಶಾಸಕರ ಬಂಡಾಯ ಶಮನ ಮಾಡಲಾಗದ ದುರ್ಬಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಬೇಕಾಬಿಟ್ಟಿ ಎಲ್ಲರಿಗೂ ಗೂಟದ ಕಾರು ನೀಡಿ ಸಮಾಧಾನ ಮಾಡುವ ಕಸರತ್ತು ಮಾಡುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
ಶಾಸನಸಭೆಯ ಒಟ್ಟು ಸದಸ್ಯ ಬಲದ 15 ಶೇಕಡಾದಷ್ಟು ಮಂದಿಗೆ ಮಾತ್ರ ಸಂಪುಟ ಸ್ಥಾನ ನೀಡಬಹುದು ಎಂಬ ಕಾನೂನನ್ನು ಗಾಳಿಗೆ ತೂರಿ ಮಾಡುತ್ತಿರುವ ಈ ನೇಮಕಗಳು ಅಸಂವಿಧಾನಿಕವಾಗಿದ್ದು, ಇದನ್ನು ಕೂಡಲೇ ರದ್ದು ಮಾಡಬೇಕು" ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ: ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶೋಕ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ