ದಾವಣಗೆರೆ: ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿಂದು ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳ ಕಲಾಕುಂಚದಲ್ಲಿ ಅರಳಿದ ಬದುಕು, ಬವಣೆ, ವಿಡಂಬನೆ, ಪರಿಸರ ಕಾಳಜಿ ಸೇರಿದಂತೆ ಜನರಿಗೆ ಜಾಗೃತಿ ಮೂಡಿಸುವ 70ಕ್ಕೂ ಹೆಚ್ಚು ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು.
ದೃಶ್ಯಕಲಾ ಮಹಾವಿದ್ಯಾಲಯದಲ್ಲಿಂದು ಬೆರಗು ಮೂಡಿಸುವ ಬಣ್ಣದ ಲೋಕ ನಿರ್ಮಾಣ ಆಗಿತ್ತು. ಇಲ್ಲಿ ವಾಟರ್ ಕಲರ್ ಪೇಂಟಿಂಗ್, ಡಿಜಿಟಲ್ ಆರ್ಟ್, ಪೋಸ್ಟರ್ ಕಲಾಕೃತಿ, ಪೆನ್ಸಿಲ್ ಚಿತ್ರ, ಆಕ್ರಿಲಿಕ್ ಪೇಂಟಿಂಗ್ ಮತ್ತು ಸಾಂಪ್ರದಾಯಿಕ ಚಿತ್ರಕಲೆ ಸೇರಿದಂತೆ ತರಹೇವಾರಿ ಚಿತ್ರಗಳು ಪ್ರದರ್ಶನಗೊಂಡವು. ಗಿಡ - ಮರ ಬೆಳೆಸಿ, ಜನಸಂಖ್ಯೆ ನಿಯಂತ್ರಣ, ಪ್ರಾಣಿ ಸಂಕುಲ ಉಳಿಸುವ ಮಾರ್ಗ, ಕೃಷಿ ಮಾರುಕಟ್ಟೆ ಚಿತ್ರಗಳು ಜನರನ್ನು ಆಕರ್ಷಿಸಿದವು.
ವಿದ್ಯಾರ್ಥಿನಿ ಫಿರ್ದೋಸ್ 'ಈಟಿವಿ ಭಾರತ' ಜೊತೆ ಮಾತನಾಡಿ,"ದೃಶ್ಯಕಲಾ ಮಹಾವಿದ್ಯಾಲಯದಲ್ಲಿಂದು ಚಿತ್ರಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಇಲ್ಲಿ ವಿವಿಧ ಚಿತ್ರಕಲೆಗಳನ್ನು ಪ್ರದರ್ಶನ ಮಾಡಿದ್ದೇವೆ. ಸ್ಟಿಲ್, ವಾಟರ್ ಪೇಂಟಿಂಗ್, ಪೋರ್ಟ್ರೇಟ್, ಕ್ರಿಯೇಟಿವ್ ಲೈವ್, ಲ್ಯಾನ್ಸ್ ಕೇಪ್ ಸೇರಿದಂತೆ ವಿವಿಧ ಬಗೆಯ ಪೇಂಟಿಂಗ್ ಪ್ರದರ್ಶನಕ್ಕಿಡಲಾಗಿದೆ. ನಾವು ಇಲ್ಲಿ ಸಾಕಷ್ಟು ಕಲಿತಿದ್ದೇವೆ" ಎಂದರು.
ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜೈರಾಜ್ ಚಿಕ್ಕಪಾಟೀಲ್ ಮಾತನಾಡಿ, "ಪ್ರತಿ ವರ್ಷದಂತೆ ಈ ವರ್ಷ ಕೂಡ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿದೆ. ನಾಲ್ಕು ವಿಭಾಗದ ಪೇಂಟಿಂಗ್ ಕಲಾಕೃತಿ ಪ್ರದರ್ಶನಕ್ಕಿಡಲಾಗಿದೆ. ಈ ಪೈಕಿ ಉತ್ತಮವಾದ ಒಂದು ಪೇಂಟಿಂಗ್ ಆಯ್ಕೆ ಮಾಡಿ, ಅವರಿಗೆ ಪ್ರಶಸ್ತಿ ಕೊಡಲಾಗುತ್ತದೆ. ಈಗಾಗಲೇ ವಿದ್ಯಾಲಯದ ವಿದ್ಯಾರ್ಥಿಗಳು ದೆಹಲಿಯಲ್ಲಿ ನಡೆದ ರಾಷ್ಟ್ರದ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗಿಯಾಗಿ ಪ್ರಶಸ್ತಿ ಪಡೆದಿದ್ದಾರೆ. ವಾಟರ್ ಕಲರ್ ಪೇಂಟಿಂಗ್, ಡಿಜಿಟಲ್ ಆರ್ಟ್, ಪೋಸ್ಟರ್ ಕಲಾಕೃತಿ, ಕ್ಲೇ ಮಾಡಲಿಂಗ್, ಪೆನ್ಸಿಲ್ ಕಲರ್, ಆಕ್ರಿಲಿಕ್ ಕಲರ್, ಟೆರಾಕೋಟ್ದ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿವೆ" ಎಂದು ತಿಳಿಸಿದರು.
ಇದನ್ನೂ ಓದಿ: ಹಾದಿ ಬೀದಿಯಲ್ಲಿ ಕಸ ಎಸೆಯುತ್ತಿದ್ರೆ ಜೋಕೆ!: ಇನ್ಮುಂದೆ ನಿಮ್ಮ ಮೇಲೆ 'ಮಾರ್ಷಲ್'ಗಳ ನಿಗಾ