ಬೆಂಗಳೂರು: ಬಿಬಿಎಂಪಿ ವತಿಯಿಂದ ಸಬ್ಸಿಡಿ ದರದಲ್ಲಿ ಕಾರು, ಸೈಟ್, ಯುವಕರಿಗೆ ಕೆಲಸ, ವಿಧೆವೆಯವರ ಮಾಸಾಶನ ಮಾಡಿಸಿಕೊಡುವುದಾಗಿ ನಂಬಿಸಿ, ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ದೀಪಕ್ (22) ಹಾಗೂ ಹರೀಶ್ (21) ಬಂಧಿತರು.
ಮೋಜಿನ ಜೀವನಕ್ಕೆ ವಂಚನೆ ಕಾರ್ಯದಲ್ಲಿ ತೊಡಗಿದ್ದ ಆರೋಪಿಗಳು: ಮೋಜಿನ ಜೀವನ ನಡೆಸುವುದಕ್ಕಾಗಿ ವಿಧವೆಯವರು, ಗೃಹಿಣಿಯರು, ಯುವಕರನ್ನು ಗುರಿಯಾಗಿಸಿಕೊಂಡು ಆರೋಪಿಗಳು ಕರೆ ಮಾಡುತ್ತಿದ್ದರು. ವಿಧವಾ ವೇತನ, ಬಿಬಿಎಂಪಿ ಕಚೇರಿಯಲ್ಲಿ ಕಂಪ್ಯೂಟರ್ ಅಪರೇಟರ್ ಕೆಲಸ ಹಾಗೂ ಸಬ್ಸಿಡಿ ದರದಲ್ಲಿ ಕಾರು, ಸೈಟು ಕೊಡಿಸುತ್ತೇವೆಂದು ಆಮಿಷವೊಡ್ಡುತ್ತಿದ್ದರು. ನಂತರ ಅವರಿಂದ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ಯಾವುದೇ ಕೆಲಸ ಮಾಡಿಕೊಡದೇ ವಂಚಿಸುತ್ತಿದ್ದರು.
ಪ್ರಕರಣ ದಾಖಲು: ಕಳೆದ ಅಕ್ಟೋಬರ್‌ನಲ್ಲಿ ಇದೇ ರೀತಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಂಪ್ಯೂಟರ್ ಅಪರೇಟರ್ ಕೆಲಸ ಕೊಡಿಸುವುದಾಗಿ ತಿಳಿಸಿ, 8 ಸಾವಿರ ರೂ. ಆನ್‌ಲೈನ್ ಮುಖಾಂತರ ವರ್ಗಾವಣೆ ಮಾಡಿಸಿಕೊಂಡಿದ್ದರು. ನಂತರ ಯಾವುದೇ ಕೆಲಸ ಕೊಡಿಸದೇ ವಂಚಿಸಿದ್ದರ ಕುರಿತು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
60ಕ್ಕೂ ಹೆಚ್ಚು ಜನರಿಗೆ ವಂಚನೆ: ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, 2 ಮೊಬೈಲ್ ಫೋನ್‌ಗಳು, 2 ಸಾವಿರ ನಗದು ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರು ಇದೇ ರೀತಿ ಸುಮಾರು 60ಕ್ಕೂ ಹೆಚ್ಚು ಜನರಿಗೆ 15 ಲಕ್ಷಕ್ಕೂ ಹೆಚ್ಚು ಹಣವನ್ನ ವಂಚಿಸಿರುವುದು ತನಿಖೆ ವೇಳೆಯಲ್ಲಿ ತಿಳಿದು ಬಂದಿದೆ. ಆದರೆ, ವಂಚನೆಗೊಳಗಾದ ಅನೇಕರು ಇದುವರೆಗೂ ಯಾವುದೇ ದೂರನ್ನು ನೀಡದ ಕಾರಣ ಪ್ರಕರಣ ದಾಖಲಾಗಿಲ್ಲ. ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸ್ಟಾಕ್ ಮಾರುಕಟ್ಟೆ ಇನ್ವೆಸ್ಟ್ ಹೆಸರಿನಲ್ಲಿ ಟೆಕ್ಕಿಗೆ 90 ಲಕ್ಷ ರೂ. ವಂಚನೆ: ಮೋಸಕ್ಕೆ ಬಲಿಯಾಗಂತೆ ಪೊಲೀಸರ ಸೂಚನೆ