ಬೆಂಗಳೂರು : ವನ್ಯಮೃಗಗಳನ್ನ ಬೇಟೆಯಾಡಿ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಯಾದಗಿರಿ ಮೂಲದ ಮಹೇಶ್ ದುಪ್ಪಳ್ಳಿ ಎಂದು ಗುರುತಿಸಲಾಗಿದೆ.
ಮಾಂಸಕ್ಕಾಗಿ ಕೃಷ್ಣಮೃಗ, ಉಡ, ಮುಳ್ಳುಹಂದಿ, ಮೊಲ, ನವಿಲು, ಕಾಡುಹಂದಿ ಸೇರಿದಂತೆ ವಿವಿಧ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದ ಆರೋಪಿ ಅವುಗಳ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಿದ್ದ. ಆರೋಪಿಯ ಪತ್ತೆಗೆ ಕಾರ್ಯಾಚರಣೆ ಕೈಗೊಂಡ ಬೆಂಗಳೂರು ಅಪರಾಧ ನಿಯಂತ್ರಣ ಕೋಶ ಮತ್ತು ಯಾದಗಿರಿ ವಲಯದ ಅರಣ್ಯಾಧಿಕಾರಿಗಳ ತಂಡ ಆತನನ್ನು ಬಂಧಿಸಿದೆ. ಆರೋಪಿಯಿಂದ ಕೃಷ್ಣಮೃಗದ ಮಾಂಸ, ತಲೆ ಬುರುಡೆ ಸೇರಿದಂತೆ ಕೆಲ ವನ್ಯ ಜೀವಿಗಳ ಮೂಳೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ: ಚಿಕ್ಕೋಡಿಯಲ್ಲಿ ಎಂಟು ನವಿಲು ಬೇಟೆಯಾಡಿದ ದುರುಳರು; ಓರ್ವ ಪೊಲೀಸ್ ವಶಕ್ಕೆ
ಪ್ರತ್ಯೇಕ ಪ್ರಕರಣ - ಸಿಡಿಮದ್ದು ತಿಂದು ಎತ್ತು ಸಾವು: ಕಾಡು ಪ್ರಾಣಿಗಳ ಬೇಟೆಗಾಗಿ ಪೇಪರ್ನಲ್ಲಿ ಸುತ್ತಿ ಇಡಲಾಗಿದ್ದ ಸಿಡಿಮದ್ದನ್ನು ಎತ್ತೊಂದು ತಿಂದಿತ್ತು. ಪರಿಣಾಮ ಅದರ ಬಾಯಿ ಛಿದ್ರಗೊಂಡು ಸಾವನ್ನಪ್ಪಿದ ಘಟನೆ ಜನವರಿ 16ರಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಈರೇಗೌಡನ ಹುಂಡಿ ಗ್ರಾಮದಲ್ಲಿ ನಡೆದಿತ್ತು.
ಗ್ರಾಮದ ಮಹದೇವಯ್ಯ ಎಂಬುವರ ಕೃಷಿ ಜಮೀನಿನಲ್ಲಿ ಈ ಘಟನೆ ನಡೆದಿದೆ. ಕಾಡು ಹಂದಿ ಸೇರಿದಂತೆ ವಿವಿಧ ಪ್ರಾಣಿಗಳ ಬಲಿಗಾಗಿ ಕೃಷಿ ಜಮೀನಿನಲ್ಲಿ ಕಿಡಿಗೇಡಿಗಳು ಸಿಡಿಮದ್ದನ್ನು ಬಚ್ಚಿಟ್ಟಿದ್ದರು. ತಿನ್ನುವ ಪದಾರ್ಥ ಇರಬಹುದು ಎಂದು ಎತ್ತು ಬಾಯಿ ಹಾಕಿದಾಗ ಸಿಡಿಮದ್ದು ಸ್ಫೋಟಗೊಂಡು ಬಾಯಿ ಛಿದ್ರವಾಗಿ ಸ್ಥಳದಲ್ಲೇ ಸಾವನ್ನಪ್ಪಿದೆ.
ಘಟನಾ ಸ್ಥಳಕ್ಕೆ ಮೈಸೂರಿನ ಉಪ ಪೊಲೀಸ್ ವರಿಷ್ಠಾಧಿಕಾರಿ ಬಾಬು, ನಂಜನಗೂಡು ಡಿವೈಎಸ್ಪಿ ಗೋವಿಂದರಾಜು, ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಕರಕಿಕಟ್ಟಿ, ದೊಡ್ಡಯ್ಯ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಶ್ವಾನದಳದ ಮೂಲಕ ಸ್ಥಳ ಪರಿಶೀಲನೆ ಮಾಡಿ, ಕಿಡಿಗೇಡಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.
ಮಕ್ಕಳ ಕೈಗೆ ಸಿಕ್ಕ ಹಂದಿ ಬೇಟೆಗೆ ಬಳಸುವ ಸಿಡಿ ಮದ್ದಿನ ಉಂಡೆ (ಪ್ರತ್ಯೇಕ ಸುದ್ದಿ) : ಹಂದಿ ಬೇಟೆಗೆ ಬಳಸುವ ಸಿಡಿ ಮದ್ದಿನ ಉಂಡೆ ಮಕ್ಕಳ ಕೈಗೆ ಸಿಕ್ಕಿದ್ದು, ಭಾರಿ ಅನಾಹುತ ತಪ್ಪಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯನಕನಹಳ್ಳಿ ತಾಲೂಕಿನ ಮಾದೇನಹಳ್ಳಿಯಲ್ಲಿ (ಜನವರಿ- 5-24) ನಡೆದಿತ್ತು.