ಬೆಂಗಳೂರು: ಪುರುಷರ ವೇಷ ಧರಿಸಿ ಮನೆ, ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಗುಂಪಿನ ಓರ್ವ ಮಹಿಳೆಯೊಬ್ಬಳನ್ನು ಬಗಲಗುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ನಿಲೂಪರ್ (22) ಬಂಧಿತೆ. ಆರೋಪಿತಳಿಂದ 4.9 ಲಕ್ಷ ಮೌಲ್ಯದ 70 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಯು ಅಪ್ರಾಪ್ತ ಬಾಲಕಿಸಹಿತ ನಾಲ್ವರು ಸದಸ್ಯರ ತಂಡ ಹೊಂದಿದ್ದಳು. ಮೋಜು-ಮಸ್ತಿಯ ಹವ್ಯಾಸ ಹೊಂದಿದ್ದ ಆರೋಪಿಗಳ ಪೈಕಿ ಮೂವರು ಮಹಿಳೆಯರು ಪುರುಷರ ವೇಷ ಧರಿಸಿ ಆಟೋ ಚಲಾಯಿಸಿಕೊಂಡು ಬಂದು ಅಂಗಡಿ ಮನೆಗಳಲ್ಲಿ ಮಾಲೀಕರೊಂದಿಗೆ ಮಾತುಕತೆಗಿಳಿಯುತ್ತಿದ್ದರು. ಅದೇ ಸಮಯದಲ್ಲಿ ಆರೋಪಿಗಳ ಗುಂಪಿನಲ್ಲಿರುವ ಬಾಲಕಿ ಮನೆ/ಅಂಗಡಿಗಳಲ್ಲಿರುವ ಚಿನ್ನಾಭರಣ, ನಗದು ಕಳವು ಮಾಡುತ್ತಿದ್ದಳು. ಆರೋಪಿಗಳು ಇದೇ ರೀತಿ ಆಗಸ್ಟ್ 2ರಂದು ಬಗಲಗುಂಟೆ ವ್ಯಾಪ್ತಿಯೊಂದರಲ್ಲಿ ಅಂಗಡಿಗೆ ಹೊಂದಿಕೊಂಡಿರುವ ಮನೆಯೊಂದರಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಆಗಸ್ಟ್ 15ರಂದು ಡಿ.ಜೆ.ಹಳ್ಳಿ ಸಮೀಪದ ಶಾಂಪುರ ಬಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಉಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಬಂಧಿತಳಿಂದ 4.9 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಇನ್ನೂ 55 ಗ್ರಾಂ ಚಿನ್ನದ ಒಡವೆಗಳನ್ನು ತಲೆಮರೆಸಿಕೊಂಡಿರುವ ಆರೋಪಿತೆಯರ ಪೈಕಿ ಓರ್ವಳು ತೆಗೆದುಕೊಂಡು ಹೋಗಿರುವುದಾಗಿ ಆರೋಪಿ ಮಾಹಿತಿ ನೀಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಷಿನ್‌ನಲ್ಲಿ ಕರಗಿಸಿ ಇಟ್ಟಿದ್ದ 61.8 ಲಕ್ಷ ಮೌಲ್ಯದ ಆಭರಣಗಳ ಲಿಕ್ವಿಡ್ ಕಳುವು ಪ್ರಕರಣ: ನಾಲ್ವರ ಬಂಧನ...