ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ 3064 ಸಶಸ್ತ್ರ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳಿಗೆ (ಪುರುಷ, ತೃತೀಯ ಲಿಂಗಿಗಳು) ಲಿಖಿತ ಪರೀಕ್ಷೆ ಇದೇ ತಿಂಗಳು 28 ರಂದು ನಡೆಯಲಿದ್ದು, ಈ ಸಂಬಂಧ ಅಭ್ಯರ್ಥಿಗಳು ಪಾಲಿಸಬೇಕಾದ ವಸ್ತ್ರಸಂಹಿತೆ ಮಾರ್ಗಸೂಚಿ ಹೊರಡಿಸಲಾಗಿದೆ.
ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಹಿಂದೆ ನಡೆದಿದ್ದ ಪಿಎಸ್ಐ ಹಗರಣವನ್ನು ಸಶಸ್ತ್ರ ಪೊಲೀಸ್ ಕಾನ್ಸ್ಟೆಬಲ್ ಪರೀಕ್ಷೆಯಲ್ಲಿ ಮರುಕಳಿಸದಂತೆ ಎಚ್ಚರವಹಿಸುವುದು ಪೊಲೀಸ್ ನೇಮಕಾತಿ ವಿಭಾಗದ ಜವಾಬ್ದಾರಿಯಾಗಿದೆ. ಹೀಗಾಗಿ ಪರೀಕ್ಷೆ ಬರೆಯುವವರು ಕಡ್ಡಾಯವಾಗಿ ವಸ್ತ್ರ ಸಂಹಿತೆ ಪಾಲಿಸಬೇಕೆಂದು ಆದೇಶ ಹೊರಡಿಸಿದೆ.
ಜನವರಿ 28ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 12.30ರ ವರೆಗೆ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ನಿಗದಿತ ಸಮಯಕ್ಕೂ ಮುಂಚಿತವಾಗಿ ಹಾಜರಿರಬೇಕು. ಪುರುಷ ಮತ್ತು ತೃತೀಯಲಿಂಗಿ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್‌ಅನ್ನು ಕಡ್ಡಾಯವಾಗಿ ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ರಹಿತ ಶರ್ಟ್‌ಗಳನ್ನು ಧರಿಸುವುದು, ಜಿಪ್ ಪ್ಯಾಕೆಟ್ಗಳು, ದೊಡ್ಡ ಬಟನ್‌ಗಳು ಇರುವ ಶರ್ಟ್‌ಗಳನ್ನು ಧರಿಸುವಂತಿಲ್ಲ.
ಜೀನ್ಸ್ ಪ್ಯಾಂಟ್ ಮತ್ತು ಹೆಚ್ಚಿನ ಜೇಬುಗಳಿರುವ ಪ್ಯಾಂಟ್ಗಳನ್ನು ಧರಿಸಕೂಡದು. ಪರೀಕ್ಷಾ ಕೇಂದ್ರದೊಳಗೆ ಹೂಗಳನ್ನು ನಿಷೇಧಿಸಲಾಗಿದ್ದು, ಅಭ್ಯರ್ಥಿಗಳು ತೆಳುವಾದ ಅಡಿಭಾಗವಿರುವ ಪಾದರಕ್ಷೆ ಧರಿಸುವುದು. ಕುತ್ತಿಗೆ ಸುತ್ತ ಯಾವುದೇ ಲೋಹದ ಆಭರಣಗಳು ಅಥವಾ ಉಂಗುರ ಮತ್ತು ಕಡಗ ಧರಿಸುವುದು ನಿಷೇಧಿಸಲಾಗಿದೆ ಎಂದು ನೇಮಕಾತಿ ವಿಭಾಗದ ಡಿಐಜಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಪಿಎಸ್ಐ ನೇಮಕಾತಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ: ಪೊಲೀಸ್ ಆಯುಕ್ತ ದಯಾನಂದ್