ಚಾಮರಾಜನಗರ : ಕರ್ನಾಟಕ ಸುವರ್ಣ ಸಂಭ್ರಮ ಹಿನ್ನೆಲೆ ಭಾನುವಾರ ಚಾಮರಾಜನಗರದಲ್ಲಿ ಅರ್ಜುನ್ ಜನ್ಯ ಅವರಿಂದ ರಸಸಂಜೆ ಕಾರ್ಯಕ್ರಮ ನಡೆಯಿತು.
ಚಾಮರಾಜನಗರದ ಚಾಮರಾಜೇಶ್ವರ ದೇಗುಲ ಮುಂಭಾಗ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಅರ್ಜುನ ಜನ್ಯ ಮತ್ತು ತಂಡ ಗಾಯನ ಮೋಡಿ ಮಾಡಿತು. ರಾಮನಾಮ ಹಾಡಿರೋ ಎಂಬ ಹಾಡಿಗೆ ಸಾವಿರಾರು ಮಂದಿ ಧ್ವನಿಗೂಡಿಸಿ ಕುಣಿದು ಕುಪ್ಪಳಿಸಿದರು. ಜನರ ಬಳಿಯೇ ಬಂದು ಗಾಯಕ ಹಾಡನ್ನು ಹಾಡಿ ರಂಜಿಸಿದರು.
ಅರ್ಜುನ್ ಜನ್ಯಗೆ ಹೇಮಂತ್, ರೆಮೊ ಸಾಥ್ ಕೊಟ್ಟರು. ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದರು ಕೂಡ ಭಾಗಿಯಾಗಿ ಜನರನ್ನು ರಂಜಿಸಿದರು. ಇನ್ನು, ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ಚಾಲನೆ ನೀಡಿ, ರಾಜ್ಯ ಸರ್ಕಾರವು ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ವರ್ಷವಿಡಿ ನಾಡು ನುಡಿ ಕುರಿತು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ರಾಜ್ಯವು ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರೈಸಿದ್ದು, ಇದರ ಸಂಭ್ರಮವನ್ನು ರಾಜ್ಯ ಸರ್ಕಾರ ವರ್ಷವಿಡೀ ಅನೇಕ ಕನ್ನಡ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿದೆ. ಮುಖ್ಯಮಂತ್ರಿಗಳು ಸುವರ್ಣ ಕರ್ನಾಟಕ ಸಂಭ್ರಮ ಕಾರ್ಯಕ್ರಮ ಅದ್ದೂರಿ ಆಚರಣೆ ಘೋಷಣೆ ಮಾಡಿದ್ದು, ಇದರ ಅಂಗವಾಗಿ ರಾಜ್ಯದ ಎಲ್ಲೆಡೆ ವಿವಿಧ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಇದೇ ಆಗಸ್ಟ್ 8 ರಂದು ಜಿಲ್ಲೆಗೆ ಕನ್ನಡ ರಥ ಆಗಮಿಸಲಿದ್ದು, ಎಲ್ಲಾ ತಾಲೂಕುಗಳಲ್ಲಿ ಸಂಚರಿಸಲಿದೆ. ಕನ್ನಡದ ಬಗೆಗಿನ ಪ್ರೇಮ,ನಾಡು,ನುಡಿ ಜಾಗೃತಿ ಮೂಡಿಸಲಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: 'ರಂಗಸಮುದ್ರ' ಚಿತ್ರದ ಹಾಡಿಗೆ ದನಿಯಾದ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಮ್.ಎಮ್ ಕೀರವಾಣಿ