ಬೆಂಗಳೂರು: ರಾಜ್ಯದ ಹಣಕಾಸು ವ್ಯವಸ್ಥೆ ಮೇಲುಸ್ತುವಾರಿಗೆ ವಿದೇಶಿ ಕನ್ಸಲ್ಟೆನ್ಸಿ ನೇಮಕ ವಿಚಾರ ಆಶ್ಚರ್ಯ ಮತ್ತು ಶಾಕಿಂಗ್ ಕೂಡಾ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಸಿದ್ದರಾಮಯ್ಯ ಸರ್ಕಾರ ಎಲ್ಲ ವಿಧದಲ್ಲೂ ವಿಫಲವಾಗಿದೆ ಎಂದು ಆರೋಪಿಸಿದರು.
ಸಿಎಂ ಸುತ್ತ ಅಷ್ಟು ತಜ್ಞ ಅಧಿಕಾರಿಗಳು ಇದ್ದಾಗಲೂ ರಾಜ್ಯದ ಹಣಕಾಸು ವ್ಯವಸ್ಥೆ ಮೇಲುಸ್ತುವಾರಿಗೆ ವಿದೇಶಿ ಕನ್ಸಲ್ಟೆನ್ಸಿ ಆಯ್ಕೆ ಮಾಡಿದ್ದಾರೆ. ಒಂದು ವರ್ಷದಿಂದ ಯಾವುದೇ ಅಭಿವೃದ್ಧಿ ಇಲ್ಲ, ಹೂಡಿಕೆ ಬಂದಿಲ್ಲ. ಕರ್ನಾಟಕ ರಾಜ್ಯ ಸಿದ್ದರಾಮಯ್ಯ ನಾಯಕತ್ವದಲ್ಲಿ ಬಳಲುತ್ತಿದೆ ಎಂದು ವಿಜಯೇಂದ್ರ ಟೀಕಿಸಿದರು.
ಸಿಎಂ ಸಿದ್ದರಾಮಯ್ಯ ನಮ್ಮ ರಾಜ್ಯದಿಂದಲೇ ಸೂಕ್ತ ವ್ಯಕ್ತಿಯನ್ನು ಯಾಕೆ ಗುರುತಿಸಲಿಲ್ಲ? ಹಲವು ಹಿರಿಯ ಐಎಎಸ್ ಅಧಿಕಾರಿಗಳು ಇದ್ದಾರೆ. ಅವರನ್ನು ಮೇಲುಸ್ತುವಾರಿ ಮಾಡಲಾಗಲ್ಲವಾ? ಯಡಿಯೂರಪ್ಪ, ಎಸ್.ಎಂ.ಕೃಷ್ಣ ಇವರೆಲ್ಲಾ ಸಿಎಂ ಆಗಿದ್ದಾಗ ಕರ್ನಾಟಕ ಎಲ್ಲಾ ಹಂತದಲ್ಲೂ ಮುಂದಿತ್ತು. ಯಾವುದೇ ವಿದೇಶಿ ತಜ್ಞರ ಮೇಲುಸ್ತುವಾರಿ ಇರಲಿಲ್ಲ. ಈಗ ಸಿದ್ದರಾಮಯ್ಯಗೆ ವಿದೇಶಿ ತಜ್ಞರು ಸಹಕಾರ ಮಾಡುತ್ತಾರೆ ಅಂತ ನನಗೆ ಅನ್ನಿಸುತ್ತಿಲ್ಲ. ಅಭಿವೃದ್ಧಿಶೀಲ ರಾಜ್ಯವಾಗಿ ಕರ್ನಾಟಕಕ್ಕೆ ಸಂಪನ್ಮೂಲ ಹೂಡಿಕೆ ಬರುವುದನ್ನು ಬಯಸುತ್ತಾರೋ, ಇಲ್ಲವೋ ಎಂಬುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಚನ್ನಪಟ್ಟಣ ಅಭ್ಯರ್ಥಿ ಶೀಘ್ರ ತೀರ್ಮಾನ: ಚನ್ನಪಟ್ಟಣದಲ್ಲಿ ಡಿ.ಕೆ.ಶಿವಕುಮಾರ್ ಸ್ಪರ್ಧೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಡಿ.ಕೆ.ಶಿವಕುಮಾರ್ ಈಗಾಗಲೇ ಶಾಸಕರಿದ್ದಾರೆ. ಆದರೂ ಚನ್ನಪಟ್ಟಣದಲ್ಲಿ ಸ್ಪರ್ಧೆಯ ಅಭಿಲಾಷೆ ವ್ಯಕ್ತಪಡಿಸಿದ್ದಾರೆ ಇದು ಅವರ ಪಕ್ಷದ ತೀರ್ಮಾನ, ಆದರೂ ಜನರ ಮನದಾಳದಲ್ಲಿ ಏನಿದೆ ಎಂಬುದು ಇನ್ನೂ ನಿಗೂಢವಾಗಿದೆ. ಬೆಂಗಳೂರು ಗ್ರಾಮೀಣ ಕ್ಷೇತ್ರದಲ್ಲಿ ತಮ್ಮನ್ನು ಸೋಲಿಸುವವರೇ ಇಲ್ಲ ಅಂತ ಅವರು ಅಂದುಕೊಂಡಿದ್ದರು. ಆದರೆ, ಜನರ ತೀರ್ಪು ಏನಿತ್ತು ಅಂತ ಎಲ್ಲರೂ ನೋಡಿದ್ದೀರಾ. ಚನ್ನಪಟ್ಟಣ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಯಾರಾಗಬೇಕು ಅಂತ ನಾವು ಮತ್ತು ಜೆಡಿಎಸ್ ನಾಯಕರು ಶೀಘ್ರದಲ್ಲೇ ತೀರ್ಮಾನ ಮಾಡುತ್ತೇವೆ ಎಂದರು.
ಹರೀಶ್ಗೆ ತಾಕೀತು: ದಾವಣಗೆರೆ ಸೋಲಿಗೆ ಯಡಿಯೂರಪ್ಪ, ವಿಜಯೇಂದ್ರ ಕಾರಣ ಎಂಬ ಶಾಸಕ ಬಿ.ಪಿ.ಹರೀಶ್ ಹೇಳಿಕೆ ವಿಚಾರಕ್ಕೆ ವಿಜಯೇಂದ್ರ ಗರಂ ಆದರು. ನಮ್ಮ ಶಾಸಕ ಮಿತ್ರ ಹರೀಶ್ ಆಗಲಿ, ಅಥವಾ ಬೇರೆ ಯಾರೇ ಆಗಲಿ ಬಹಿರಂಗವಾಗಿ ಹೇಳಿಕೆ ಕೊಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ ಅಂದರೆ ಹೇಳಲಿ. ನನ್ನದೇನೂ ತಕರಾರಿಲ್ಲ. ಆದರೆ ನಾನು ರಾಜ್ಯಾಧ್ಯಕ್ಷನಾಗಿ ಈ ಬಗ್ಗೆ ಮನವಿ ಮಾಡುತ್ತಿದ್ದೇನೆ. ಏನೇ ಸಮಸ್ಯೆ ಇದ್ದರೂ ಪಕ್ಷದ ಕಚೇರಿಗೆ ಬಂದು ಚರ್ಚೆ ಮಾಡಿ, ಈ ರೀತಿ ಹೇಳಿಕೆಗಳಿಂದ ಪಕ್ಷಕ್ಕೂ ಲಾಭ ಆಗಲ್ಲ, ಸಂಘಟನೆಗೂ ಲಾಭವಿಲ್ಲ. ಎಲ್ಲವನ್ನೂ ಸರಿ ಮಾಡುತ್ತೇವೆ ಎಂದು ತಿಳಿಸಿದರು.
ನೂತನ ಸಂಸದರಿಗೆ ಸನ್ಮಾನ: ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಎನ್ಡಿಎ ಸಂಸದರಿಗೆ ಸನ್ಮಾನ ಮಾಡಲಾಗುತ್ತದೆ. ನಮ್ಮ ರಾಜ್ಯದಿಂದ ಬಿಜೆಪಿ ಜೆಡಿಎಸ್ನಿಂದ ಆಯ್ಕೆ ಆಗಿರುವ 19 ಸಂಸದರಿಗೆ ಸನ್ಮಾನ ಮಾಡಲಾಗುವುದು. ಕೇಂದ್ರದ ಸಚಿವ ಸಂಪುಟಕ್ಕೆ ಆಯ್ಕೆಯಾದ ಸಚಿವರಿಗೂ ಅಭಿನಂದನಾ ಕಾರ್ಯಕ್ರಮ ಇರಲಿದೆ ಎಂದರು.
ಇದನ್ನೂ ಓದಿ: ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವನೆ ಸದ್ಯ ಸರ್ಕಾರದ ಮುಂದಿಲ್ಲ: ಸಿಎಂ ಸಿದ್ದರಾಮಯ್ಯ - Bus Fare Hike Issue