ಧಾರವಾಡ: "ಪ್ರಧಾನಿ ಮೋದಿ ವಿರೋಧಿ ಅಲೆ ಆರಂಭವಾಗಿದೆ. ಅವರಿಂದ ಯಾವುದೇ ಅನುಕೂಲವಾಗುವ ಕಾರ್ಯಕ್ರಮ ನಡೆದಿಲ್ಲ. ನಮ್ಮ ಐದು ಗ್ಯಾರೆಂಟಿಗಳು ಮನೆ ಮನೆಗಳನ್ನು ಮುಟ್ಟಿವೆ. ಎಲ್ಲವನ್ನೂ ಜನ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಇವೆಲ್ಲ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರತಿಫಲಿಸಲಿವೆ" ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
"ಈ ಬಾರಿ ನಾನು ಇಲ್ಲಿ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಮುಖಂಡರು ಹಾಗೂ ನಮ್ಮ ಕಾರ್ಯಕರ್ತರನ್ನು ಬಿಟ್ಟರೆ ನಾನು ದೊಡ್ಡ ಜೀರೋ. ಎಲ್ಲರನ್ನೂ ಜತೆಗೆ ಕರೆದುಕೊಂದು ಹೋಗುವುದೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ" ಎಂದರು.
ದಿಂಗಾಲೇಶ್ವರ ಶ್ರೀಗಳಿಂದ ನಾಳೆ ಧಾರವಾಡದಲ್ಲಿ ಸಭೆ ನಡೆಸಲಿರುವ ಕುರಿತು ಮಾತನಾಡಿ, "ದಿಂಗಾಲೇಶ್ವರ ಶ್ರೀಗಳು ಬಹಳ ಪ್ರಭಾವಿ. 2006ರಿಂದ ನನಗೆ ಪರಿಚಯ. ನಾನೂ ಕೂಡ ಅವರ ದೊಡ್ಡ ಅಭಿಮಾನಿ. ಅವರ ಮಾತಿನಲ್ಲಿ ಗಂಭೀರತೆ ಇದೆ. ಚುನಾವಣೆ ವಿಷಯ ಅಷ್ಟೇ ಅಲ್ಲ, ಅವರು ಯಾವಾಗ ಮಾತನಾಡಿದರೂ 10 ಸಾವಿರ ಜನ ಸೇರ್ತಾರೆ. ಅವರ ಸೈದ್ಧಾಂತಿಕ ಭಾಷಣ, ಸಮಾಜಕ್ಕೆ ಸಂದೇಶ ಕೊಡುತ್ತದೆ. ಅದನ್ನು ಕಡೆಗಣಿಸಲು ಸಾಧ್ಯವಿಲ್ಲ. ಅವರದ್ದೇ ಆದ ಅಭಿಮಾನಿ ಬಳಗ ಇದೆ. ಕೇವಲ ಒಂದು ಸಮುದಾಯಕ್ಕೆ ಮಾತ್ರವಲ್ಲ, ದಿಂಗಾಲೇಶ್ವರ ಶ್ರೀ ಎಲ್ಲಾ ಸಮುದಾಯದ ಮೇಲೆ ಅವರ ಪ್ರಭಾವ ಇದೆ. ಅವರು ಬಹಿರಂಗವಾಗಿ ಬಂದು ನೋವು ತೋಡಿಕೊಂಡಿದ್ದಾರೆ. ಅವರ ನಿರ್ಣಯ ಅವರಿಗೆ ಬಿಟ್ಟಿದ್ದು. ಸಾರ್ವಜನಿಕವಾಗಿ ಎಲ್ಲಾ ಶ್ರೀಗಳು ಬಂದು ಮಾತನಾಡುತ್ತಿದ್ದಾರೆ. ಇದನ್ನು ಬಿಜೆಪಿಯವರು ಅರ್ಥ ಮಾಡ್ಕೋಬೇಕು ಅನ್ನೋದು ನನ್ನ ಭಾವನೆ" ಎಂದು ಹೇಳಿದರು.
ದಿಂಗಾಲೇಶ್ವರ ಶ್ರೀ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, "ಖಂಡಿತವಾಗಿಯೂ ಅವರ ಸ್ಪರ್ಧೆಯಿಂದ ಎಫೆಕ್ಟ್ ಆಗುತ್ತದೆ. ಇಂಥವರಿಗೇ ಎಫೆಕ್ಟ್ ಆಗುತ್ತೆ ಅಂತಾ ಹೇಳೋಕೆ ಆಗಲ್ಲ. ಸ್ವಾಮೀಜಿಗೆ ಬಿಜೆಪಿ ಕಾಂಗ್ರೆಸ್ ಎರಡರಲ್ಲೂ ಫಾಲೋವರ್ಸ್ ಇದ್ದಾರೆ. ಅವರು ಒಂದು ಸಮುದಾಯಕ್ಕೆ ಸೇರಿದ ಸ್ವಾಮೀಜಿ ಅಲ್ಲ, ಅವರ ಮಠವೇ ಜಾತ್ಯತೀತ ಮಠ" ಎಂದು ತಿಳಿಸಿದರು.
ರಾಜ್ಯಕ್ಕೆ ಕೈ ನಾಯಕರ ಆಗಮನ ಕುರಿತು ಮಾತನಾಡಿ, "ನಮ್ಮ ರಾಷ್ಟ್ರೀಯ ನಾಯಕರು ಖಂಡಿತವಾಗಿಯೂ ಬರ್ತಾರೆ. ಇನ್ನು ದಿನಾಂಕ ನಿಗದಿಯಾಗಿಲ್ಲ. ಧಾರವಾಡ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ 18ಕ್ಕೆ ನಾಮಪತ್ರ ಸಲ್ಲಿಸಲು ನಿರ್ಧಾರ ಮಾಡಿದ್ದೇವೆ" ಎಂದು ಹೇಳಿದರು.
ನಾಳೆ ಧಾರವಾಡದಲ್ಲಿ ದಿಂಗಾಲೇಶ್ವರ ಶ್ರೀ ಸಭೆ ಕುರಿತು ವಿನೋದ್ ಅಸೂಟಿ ಮಾತನಾಡಿ, "ಅಜ್ಜವರು ಒಬ್ಬ ಹಿರಿಯರು ಅವರ ಬಗ್ಗೆ ಮಾತನಾಡೋಕೆ ನಾನು ಸಣ್ಣವನು. ಅಜ್ಜಾರ ಏನು ನಿರ್ಧಾರ ತೆಗೆದುಕೊಳ್ತಾರೋ ತೆಗೆದುಕೊಳ್ಳಲಿ. ಅದರ ಬಗ್ಗೆ ಜಾಸ್ತಿ ನಾನೇನೂ ಹೇಳೋಕೆ ಹೋಗಲ್ಲ" ಎಂದು ಹೇಳಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಹಿಂದುತ್ವದ ಅಭ್ಯರ್ಥಿಗಳಿಗೆ ಮತ ಚಲಾಯಿಸಿ: ವಿಹೆಚ್ಪಿ ಮನವಿ - Vishwa Hindu Parishad