ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೊಡಮಾಡುವ ವಿವಿಧ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳ ಪುರಸ್ಕೃತರನ್ನು ಆಯ್ಕೆ ಸಮಿತಿಗಳ ಮೂಲಕ ಹೆಸರುಗಳನ್ನು ಆಯ್ಕೆ ಮಾಡಿ ಪ್ರಕಟಿಸಿದೆ. ಈ ಬಾರಿಯ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಆನಂದ್ ತೆಲ್ತುಂಬಡೆ ಹಾಗೂ ಡಾ. ಎನ್. ಜಿ ಮಹದೇವಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಹಾಗೆಯೇ ಶ್ರೀ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಗೆ ಜಿನದತ್ತ ದೇಸಾಯಿ ಹಾಗೂ ಗುಜರಾತಿನ ಗಾಂಧಿ ಸೇವಾಶ್ರಮ ಅವರನ್ನು ಆಯ್ಕೆ ಮಾಡಲಾಗಿದೆ. ಟಿ. ಚೌಡಯ್ಯ ಪ್ರಶಸ್ತಿಗಾಗಿ ನಿತ್ಯಾನಂದ ಹಳದಿಪುರ ಹಾಗೂ ಶ್ರೀರಾಮುಲು ಅವರನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ ಪ್ರತಿಷ್ಠಿತ ಪಂಪ ಪ್ರಶಸ್ತಿಯೂ ಸೇರಿದಂತೆ ವಿವಿಧ ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಪುರಸ್ಕೃತರನ್ನು ಕೂಡಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದೆ. ಈ ಪ್ರಶಸ್ತಿಗಳನ್ನು ಜನವರಿ 31ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.31 ರಂದು ಈ ಪ್ರಶಸ್ತಿಗಳನ್ನು ವಿತರಣೆ ಮಾಡಲಿದ್ದಾರೆ. ಇದರ ಜೊತೆಗೆ ಈ ಹಿಂದೆ ಘೋಷಣೆ ಮಾಡಲಾಗಿದ್ದ, 2018-19, 2020-21, 2021-22 ಹಾಗೂ 2022-23ನೇ ಸಾಲಿನ ಪ್ರಶಸ್ತಿಗಳನ್ನು ಸಹ ಇದೇ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ನಾನಾ ಕಾರಣಗಳಿಗಾಗಿ ಈ ಪ್ರಶಸ್ತಿಗಳು ವಿತರಣೆ ಆಗಿರಲಿಲ್ಲ. ವಿತರಣೆ ಆಗದೇ ಇರುವ 31 ಪ್ರಶಸ್ತಿಗಳು ಸೇರಿದಂತೆ ಒಟ್ಟು 75 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಖೃತಿ ಇಲಾಖೆ ಸಚಿವರು ಹೇಳಿದ್ದಾರೆ.
ಇದರಲ್ಲಿ 2018-19ನೇ ಸಾಲಿನಲ್ಲಿ ಬಿ. ವಿ ಕಾರಂತ ಪ್ರಶಸ್ತಿಗೆ ಭಾಜನರಾಗಿದ್ದ ಎಸ್. ಮಾಲತಿ, ಶಿವಮೊಗ್ಗ ಹಾಗೂ 2021-22ನೇ ಸಾಲಿನಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಭಾಜನರಾಗಿದ್ದ ಬಾಬಣ್ಣ ಕಲ್ಮನಿ ಅವರು ನಿಧನರಾಗಿದ್ದು, ಅವರ ಕುಟುಂಬ ಸದಸ್ಯರಿಗೆ ಪ್ರಶಸ್ತಿ ವಿತರಿಸಲಾಗುವುದು ಎಂದು ಸಚಿವರು ಇದೇ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ: 'ಬಿಹಾರದ ದೇವರಾಜ ಅರಸು': ಕರ್ಪೂರಿ ಠಾಕೂರ್ಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸಂತಸ