ಚಿಕ್ಕಬಳ್ಳಾಪುರ: ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯ ಮತ್ತು ಶ್ರೀ ಆಂಜನೇಯಸ್ವಾಮಿ ದೇವಾಲಯಗಳು ಚಿಂತಾಮಣಿ ತಾಲೂಕಿನಲ್ಲಿರುವ ಪುರಾತನ ದೇವಾಲಯಗಳು. ಇದೀಗ ದೇವಾಲಯದ ಸಮೀಪದಲ್ಲಿರುವ ಆಲಂಬಗಿರಿ ಕೆರೆ ಅಚ್ಚುಕಟ್ಟು ಪ್ರದೇಶದ ರಸ್ತೆ ಹೊಂದಿಕೊಂಡಿರುವ ಜಾಗದಲ್ಲಿ ರಾಶಿ ರಾಶಿ ನಾಗರಕಲ್ಲುಗಳು ಪತ್ತೆಯಾಗಿವೆ.
ಆಲಂಬಗಿರಿ ಗ್ರಾಮದ ಹೆಗ್ಗಡಿ ಮುನಿಯಪ್ಪ ಕುಟುಂಬದವರು ನಾಗರಕಲ್ಲು ಪತ್ತೆಯಾಗಿರುವ ಪ್ರದೇಶದಲ್ಲಿ ಪುರಾತನ ಕಾಲದಲ್ಲಿ ಪ್ರತಿಷ್ಟಾಪಿಸಿದ್ದ ನಾಗರ ಕಲ್ಲುಗಳಿಗೆ ನಾಗರಪಂಚಮಿ, ಗಣೇಶ ಚತುರ್ಥಿ ಸಂದರ್ಭದಲ್ಲಿ ಪ್ರತಿವರ್ಷ ಪೂಜೆ ಸಲ್ಲಿಸುತ್ತಾ ಬಂದಿದ್ದರು. ಹೆಗ್ಗಡಿ ಮುನಿಯಪ್ಪನವರು ನಿಧನರಾದ ನಂತರ ಸದರಿ ನಾಗರಕಲ್ಲುಗಳಿಗೆ ದಿನಗಳು ಕಳೆದಂತೆ ಪೂಜೆ ಸಲ್ಲಿವುದನ್ನು ನಿಲ್ಲಿಸಿದ್ದರು. ಇತ್ತೀಚೆಗೆ ಕುಟುಂಬದ ಸದಸ್ಯರು ಸಮಸ್ಯೆಯೊಂದರ ಬಗ್ಗೆ ಶಾಸ್ತ್ರ ಹೇಳುವವರ ಮೊರೆ ಹೋದಾಗ ಪುರಾತನ ಕಾಲದಿಂದ ನಿಮ್ಮ ಕುಟುಂಬದವರು ನಾಗರ ಕಲ್ಲುಗಳಿಗೆ ಪೂಜೆ ಮಾಡುತ್ತಿದ್ದು, ಇದೀಗ ಆ ಕಲ್ಲುಗಳಿಗೆ ಪೂಜೆ ನಿಲ್ಲಿಸಿದ್ದು, ಕೂಡಲೇ ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸುವಂತೆ ಸೂಚಿಸಿದ್ದರು.
ದಿವಂಗತ ಹೆಗ್ಗಡಿ ಮುನಿಯಪ್ಪ ಕುಟುಂಬದ ಸದಸ್ಯರಾದ ಮೋಹನ್ ಬಾಬು, ಗಿರಿ, ಅಶೋಕ್ ಮತ್ತಿತರರು ಸದರಿ ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸಲು ಬಂದಾಗ ನಾಗರ ಕಲ್ಲುಗಳು ರಸ್ತೆಯ ಪಕ್ಕದಲ್ಲಿ ಮುಚ್ಚಿ ಹೋಗಿದ್ದವು. ಹೀಗಾಗಿ ಅವುಗಳನ್ನು ಮೇಲಕ್ಕೆ ಎತ್ತುವ ಕೆಲಸಕ್ಕೆ ಮುಂದಾಗಿದ್ದರು. ಆ ಸಂದರ್ಭದಲ್ಲಿ ಸುತ್ತಲೂ ಗುಂಡಿ ತೆಗೆದಾಗ ಹಲವು ನಾಗರ ಕಲ್ಲುಗಳು ಸಿಕ್ಕಿವೆ. ಕೂಡಲೇ ಮತ್ತಷ್ಟು ಗುಂಡಿ ತೆಗೆದಾಗ ಮತ್ತಷ್ಟು ನಾಗರಕಲ್ಲುಗಳು ಸಿಕ್ಕಿದೆ. ರಾತ್ರಿಯಾದ್ದರಿಂದ ವಾಪಸ್ ಬಂದವರು ಬೆಳಗ್ಗೆ ಮತ್ತೆ ಗುಂಡಿಯನ್ನು ತೆಗೆದಷ್ಟು ವಿವಿಧ ಆಕೃತಿಯ ನೂರಕ್ಕೂ ಹೆಚ್ಚು ನಾಗರಕಲ್ಲುಗಳು ದೊರೆತಿವೆ.
ಈ ವಿಷಯ ತಿಳಿಯುತ್ತಿದ್ದಂತೆ ಬೆಳಗ್ಗೆಯೆ ಅಲಂಬಗಿರಿ, ಮುನುಗನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ನೂರಾರು ಮಂದಿ ನಾಗರಕಲ್ಲುಗಳು ಸಿಕ್ಕಿರುವ ಜಾಗಕ್ಕೆ ಆಗಮಿಸಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಶ್ರೀಕೃಷ್ಣಾಷ್ಟಮಿ ಸಂಭ್ರಮ: ಬಾಲಕೃಷ್ಣನಿಗೆ 116 ಬಗೆಯ ನೈವೇದ್ಯ ಬಡಿಸಿದ ಕೃಷ್ಣ ಭಕ್ತೆ - 116 dishes to god krishna