ಮಂಡ್ಯ: ದಿ.ಅಂಬರೀಶ್ ಅವರ ಆಪ್ತ ಹಾಗು ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಾರೆ. ಇಂದು ಮಂಡ್ಯದ ಅಮರಾವತಿ ಹೋಟೆಲ್ನಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಅಮರಾವತಿ ಚಂದ್ರಶೇಖರ್ ಸಹೋದರ ಅಶ್ವಥ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರನ್ನು ಜೆಡಿಎಸ್ ಪಕ್ಷಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬರ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ಕಾವೇರಿ ನೀರಿನ ವಿಷಯದಲ್ಲಿ ಮೊದಲಿಂದಲೂ ನಮಗೆ ಅನ್ಯಾಯವಾಗಿದೆ. ರಾಜ್ಯದ ಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರು ಹೆಚ್.ಡಿ.ದೇವೇಗೌಡರ ಕೊಡುಗೆ ಏನು ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಇಂದಿನ ಸಿಎಂ ಸಿದ್ದರಾಮಯ್ಯನವರು ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡುತ್ತಾರೆ ಎಂದರು.
ಈ ಜಿಲ್ಲೆಯ ಅಭಿವೃದ್ದಿಯೇ ನನ್ನ ಗುರಿ. ನಾನು ಸಿಎಂ ಆಗಿದ್ದಾಗ ಹಲವಾರು ಕೊಡುಗೆಗಳನ್ನು ನೀಡಿದ್ದೇನೆ. ಮೆಡಿಕಲ್ ಕಾಲೇಜಿಗೆ 60 ಕೋಟಿ ನೀಡಿದ್ದೇನೆ. ಹಲವಾರು ಪವರ್ ಸ್ಟೇಷನ್ ಕೊಟ್ಟಿದ್ದೇವೆ. ಬಜೆಟ್‌ನಲ್ಲಿ 9 ಸಾವಿರ ಕೋಟಿ ನೀಡಲು ಮುಂದಾದೆ. ಅದನ್ನೂ ಇವರು ಮಂಡ್ಯ ಬಜೆಟ್ ಅಂತ ಲೇವಡಿ ಮಾಡಿದರು.
ಮಂಡ್ಯದಲ್ಲಿ ಹೊಸ ಕಾರ್ಖಾನೆ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದ್ದಾರೆ. ಇವರು ಕಾರ್ಖಾನೆ ಹಣ ನೀಡಲಾಗದೇ ಕಾರ್ಖಾನೆ ಆಸ್ತಿ ಮಾರಲು ಮುಂದಾಗಿದ್ದಾರೆ. ನಾನು ಅಧಿಕಾರದಲ್ಲಿದ್ದಾಗ ಹೊಸ ಕಾರ್ಖಾನೆಗೆ 100 ಕೋಟಿ ಹಣ ಮೀಸಲಿಟ್ಟಿದ್ದೆ. ಇವರ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದಾರಾ ಎಂದು ಹೆಚ್ಡಿಕೆ ಪ್ರಶ್ನಿಸಿದರು.
ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರದಲ್ಲಿ 200 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ನಾನು ಅಧಿಕಾರಕ್ಕೆ ಬಂದ ಮೇಲೆ 200 ಕುಟುಂಬಗಳಿಗೆ ಪರಿಹಾರ ನೀಡಿ ಸಾಂತ್ವನ ಹೇಳಿದ್ದೇನೆ. ರೈತರ ಸಾಲ ಮನ್ನಾ ಮಾಡೋ ಉದ್ದೇಶದಿಂದಲೇ ನಾನು ಸಿಎಂ ಆದೆ. ಈಗ ನಮ್ಮನ್ನೇ ಲೇವಡಿ ಮಾಡುತ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದರು.
ಇದನ್ನೂ ಓದಿ : ಆಪರೇಷನ್ ಹಸ್ತ: ಕಾಂಗ್ರೆಸ್ನತ್ತ ಮುಖ ಮಾಡಿದ ಸಂಸದರ ಅಳಿಯ, ಸಿದ್ದು-ಪ್ರಸಾದ್ ಭೇಟಿ ಸಾಧ್ಯತೆ - Lok Sabha Election 2024