ಚಿಕ್ಕಮಗಳೂರು: ರಾಜ್ಯ ಸರ್ಕಾರಕ್ಕೆ ವರ್ಷ ತುಂಬಿದೆ, ಸಾಧನೆ ಮಾತ್ರ ಶೂನ್ಯ, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ, ಸಂಪೂರ್ಣ ಶೂನ್ಯವಾಗಿದ್ದು, ಇಂದು ರಾಜ್ಯದ ಜನರಿಗೆ ಭ್ರಮನಿರಸವಾಗಿದೆ. ಬೊಮ್ಮಾಯಿ, ಬಿಎಸ್ವೈ ಕಾಲದ ಯೋಜನೆಗಳ ಕೆಲಸ ಆಗ್ತಿದೆ ಅಷ್ಟೆ. ಸರ್ಕಾರ NPS ವನ್ನು ತಡೆದು ತನ್ನದೇ ಆದ ರೀತಿಯಲ್ಲಿ ನಡೆದು ಕೊಳ್ತಿದೆ ಎಂದು ಆರೋಪಿಸಿದರು.
ಶಿಕ್ಷಕರು,ಮಕ್ಕಳು, ಪೋಷಕರು ಎಲ್ಲರೂ ಗೊಂದಲದಲ್ಲಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಅಲ್ಪಸಂಖ್ಯಾತರ ತುಷ್ಟೀಕರಣದ ನೀತಿಯಿಂದ ರಾಜ್ಯದ ಜನ ಕಷ್ಟ ಅನುಭವಿಸುತ್ತಿದ್ದಾರೆ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ರು ಏನು ಮಾಡಲಿಲ್ಲ, ಪೊಲೀಸರ ಮೇಲೆ ಹಲ್ಲೆ ಮಾಡುತ್ತಾರೆ ಅಂದ್ರೆ ಸರ್ಕಾರ ಇದ್ಯಾ ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಸರ್ಕಾರದ ಮೃದು ಧೋರಣೆಯೇ ಇದಕ್ಕೆಲ್ಲಾ ಕಾರಣ. ಗೃಹ ಸಚಿವರು ಬಿಜೆಪಿ ಕಾಲದ ಕೊಲೆ ಲೆಕ್ಕ ಹೇಳ್ತಿದ್ದಾರೆ ಎಂದು ಕಿಡಿಕಾರಿದರು.
ಜನ ನಿಮ್ಮ ಮೇಲೆ ನಂಬಿಕೆ ಇಟ್ಟು ಅಧಿಕಾರ ನೀಡಿದ್ದಾರೆ. ಸಿಎಂ ರಾಜ್ಯದಲ್ಲಿ ಒಂದೇ ಒಂದು ಗುದ್ದಲಿ ಪೂಜೆ ಮಾಡಿಲ್ಲ. ಲೋಕಸಭೆ ಚುನಾವಣೆ ಫಲಿತಾಂಶ ಬಂದಾಗ ಸರ್ಕಾರಕ್ಕೆ ಅರಿವಾಗುತ್ತದೆ. 20 ಸ್ಥಾನ ಗೆಲ್ತೀವಿ ಅಂತಾರೆ, ಮೋದಿ ಗ್ಯಾರಂಟಿ ಮುಂದೆ ಯಾವ ಗ್ಯಾರಂಟಿಯೂ ಇಲ್ಲ. ಜನ ನಮಗೆ ಆಶೀರ್ವಾದ ಮಾಡಿರುವ ನಂಬಿಕೆ ಇದೆ ಎಂದು ಹೇಳಿದರು.
ಎಂ ಎಲ್ ಸಿ ಚುನಾವಣೆ ವೇಳೆ ಪಕ್ಷದಲ್ಲಿ ಉಂಟಾಗಿರುವ ಬಂಡಾಯಕ್ಕೆ ಸಂಬಂಧಿಸಿದಂತೆ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ಸಣ್ಣಪುಟ್ಟ ಗೊಂದಲ ಇರೋದು ಸಾಮಾನ್ಯ. ಒಬ್ಬಿಬ್ಬರು ಮಾತನಾಡ್ತಾರೆ ಅಂದ್ರೆ ಏನು ಆಗಲ್ಲ. ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ. ಲೋಕಸಭೆ ಚುನಾವಣೆ ಫಲಿತಾಂಶದ ಆಂತರಿಕ ವರದಿ ನನ್ನ ಕೈ ಸೇರಿಲ್ಲ ಎಂದು ಸ್ಪಷ್ಟಪಡಿಸಿದರು.
ಮೈತ್ರಿ ಅಭ್ಯರ್ಥಿ ವಿವೇಕಾನಂದ ಗೆಲುವಿಗೆ ಶ್ರಮಿಸಿ: ಬಿ.ವೈ.ವಿಜಯೇಂದ್ರ
ಎರಡು ಪಕ್ಷದ ಕಾರ್ಯಕರ್ತರು ಭಿನ್ನಾಭಿಪ್ರಾಯ ಬದಿಗಿಟ್ಟು ಮತದಾರರ ಮನವೊಲಿಸಿ ಮೈತ್ರಿ ಅಭ್ಯರ್ಥಿ ವಿವೇಕಾನಂದ ಗೆಲುವಿಗೆ ಹಗಲಿರುಳು ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮನವಿ ಮಾಡಿದರು.
ಬಿಜೆಪಿಯಿಂದ ಮೈಸೂರಿನಲ್ಲಿ ಆಯೋಜಿಸಿದ್ದ ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಮತದಾರರು ಪ್ರಬುದ್ಧರು. ಅಭ್ಯರ್ಥಿ ಕೆ. ವಿವೇಕಾನಂದ ಅವರು ಪಕ್ಷದ ಬೆಂಬಲದ ಜತೆಗೆ ವೈಯಕ್ತಿಕವಾಗಿ ಜನರ ಕಷ್ಟ, ಸುಖದಲ್ಲಿ ಭಾಗಿಯಾಗುತ್ತಾರೆ. ಇವರನ್ನು ಗೆಲ್ಲಿಸಿ ಎನ್‌ಡಿಎಗೆ ಶಕ್ತಿ ತುಂಬುವ ಕೆಲಸವಾಗಬೇಕು. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದ್ದೀರಿ. ಅದೇ ರೀತಿ ವಿಧಾನಪರಿಷತ್ ಚುನಾವಣೆಯಲ್ಲೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಕೆ.ಆರ್. ಕ್ಷೇತ್ರದಲ್ಲಿ 1900 ಮತಗಳಿದ್ದು, ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಲಾಗುವುದು. ಶಾಲಾ-ಕಾಲೇಜುಗಳು ಆರಂಭವಾಗುತ್ತಿದ್ದು, ಅಲ್ಲಿಗೂ ತೆರಳಿ ಮತಯಾಚಿಸಲು ನಿರ್ಧರಿಸಲಾಗಿದೆ. ನಮಗೆ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ತಿಳಿಸಿದರು.
ಮಾಜಿ ಸಚಿವ ಸಾ.ರಾ.ಮಹೇಶ್, ಶಾಸಕ ಜಿ.ಟಿ.ದೇವೇಗೌಡ, ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ, ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಶಾಸಕರಾದ ಅಶ್ವಿನ್ ಕುಮಾರ್, ಸಿ.ಎಸ್.ನಿರಂಜನ ಕುಮಾರ್, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ. ರಾಜೇಂದ್ರ, ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಆರ್.ರಘು ಕೌಟಿಲ್ಯ, ಬಿಜೆಪಿ ವಿಭಾಗ ಪ್ರಭಾರಿ ಮೈ.ವಿ. ರವಿಶಂಕರ್, ಮಾಜಿ ಎಂಎಲ್‌ಸಿಗಳಾದ ಸಿದ್ದರಾಜು, ತೋಂಟದಾರ್ಯ, ನಗರ ಬಿಜೆಪಿ ಅಧ್ಯಕ್ಷ ಎಲ್.ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಇದ್ದರು.