ಬೆಂಗಳೂರು: 50 ಕೋಟಿ ರೂಪಾಯಿ ಹಣ ನೀಡುವಂತೆ ತನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಗೆ ಉದ್ಯಮಿ ವಿಜಯ್ ಟಾಟಾ ಎಂಬವರು ದೂರು ನೀಡಿದ್ದಾರೆ.
ಇತ್ತೀಚೆಗೆ ವಿಜಯ್ ಟಾಟಾ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ನಿನ್ನೆ ಪತ್ರಿಕಾಗೋಷ್ಠಿ ನಡೆಸಿದ್ದ ಟಾಟಾ, ಇಂದು ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ.
ದಾಸರಹಳ್ಳಿ ನಿವಾಸಿಯಾಗಿರುವ ವಿಜಯ್ ಟಾಟಾ, ರಿಯಲ್ ಎಸ್ಟೇಟ್ ಉದ್ಯಮಿ. 2018ರಿಂದ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಸದ್ಯ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ.
''2019ರ ಮಂಡ್ಯ ಲೋಕಸಭಾ ಚುನಾವಣೆ ವೇಳೆ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಪರವಾಗಿ ಅಭಿಯಾನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೈಗೊಂಡಿದ್ದು ಇದಕ್ಕೆ ವೈಯಕ್ತಿಕವಾಗಿ ಕೋಟ್ಯಂತರ ರೂ. ಖರ್ಚು ಮಾಡಿದ್ದೇನೆ. ಮಾಜಿ ಎಂಎಲ್ಸಿ ರಮೇಶ್ ಗೌಡ ಅವರು ಆಗಸ್ಟ್ 24ರಂದು ಮನೆಗೆ ಬಂದು ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡುವುದು ಅಂತಿಮವಾಗಿದೆ ಎಂದು ಪ್ರಸ್ತಾಪಿಸಿ ಕುಮಾರಸ್ವಾಮಿಗೆ ಕರೆ ಮಾಡಿಸಿ ಮಾತನಾಡಿದರು. ಈ ಬಾರಿ ಉಪಚುನಾವಣೆಯಲ್ಲಿ ನಮಗೆ ಗೆಲುವು ಅನಿವಾರ್ಯ, ಚುನಾವಣಾ ವೆಚ್ಚಕ್ಕಾಗಿ 50 ಕೋಟಿ ರೂಪಾಯಿ ಹಣ ಕೊಡಬೇಕಾಗುತ್ತದೆ ಎಂದರು. ನಾನು ಕೂಡಲೇ, ಸರ್ ನನ್ನ ಬಳಿಯಲ್ಲಿ ಅಷ್ಟೊಂದು ಹಣವಿಲ್ಲ, ನಾನು ನನ್ನ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳನ್ನು ಕಂಪ್ಲೀಟ್ ಮಾಡಬೇಕು. ಹೀಗಾಗಿ ಪಕ್ಷದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಅಷ್ಟೇ ಎಂದು ಉತ್ತರಿಸಿದೆ. ನನ್ನ ಮಾತಿನಿಂದ ಕೋಪಗೊಂಡ ಕುಮಾರಸ್ವಾಮಿ, 50 ಕೋಟಿ ರೆಡಿ ಮಾಡಿ ಇಲ್ಲದೇ ಹೋದರೆ ನಾನು ಏನು ಮಾಡುತ್ತೀನೋ ಗೊತ್ತಿಲ್ಲ, ನೀವು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುವುದಷ್ಟೇ ಅಲ್ಲ, ಬದುಕುವುದೇ ಕಷ್ಟವಾಗುತ್ತೆ ಎಂದು ಬೆದರಿಕೆ ಹಾಕಿ ಫೋನ್ ಕಟ್ ಮಾಡಿದರು'' ಎಂದು ದೂರಿನಲ್ಲಿ ವಿವರಿಸಿದ್ದಾರೆ.
"ನನ್ನೆದುರಲ್ಲೇ ಕುಳಿತಿದ್ದ ರಮೇಶ್ ಗೌಡ ಅವರು, ಕುಮಾರಣ್ಣ ಹೇಳಿದಂತೆ 50 ಕೋಟಿ ಸಿದ್ಧಪಡಿಸಿಕೊಳ್ಳಿ ಜೊತೆಗೆ ತಾನು ದೇವಾಲಯ ಹಾಗೂ ಶಾಲೆ ಕಟ್ಟಿಸುತ್ತಿದ್ದು ಅದಕ್ಕಾಗಿ 5 ಕೋಟಿ ನೀಡುವಂತೆ ಒತ್ತಾಯಿಸಿದರು. ಈ ಹಣ ನೀಡದಿದ್ದರೆ ನಿಮಗೆ ತೊಂದರೆ ಎದುರಾಗುತ್ತದೆ" ಎಂದು ಧಮಕಿ ಹಾಕಿದ್ದಾರೆಂದು ಆರೋಪಿಸಿದ್ದಾರೆ.
ಇದನ್ನೂ ಓದಿ: 'ಎಫ್ಐಆರ್ ಆದವರೆಲ್ಲ ರಾಜೀನಾಮೆ ಕೊಡಿ ಎಂದಿದ್ದೇನೆ, ನನ್ನ ಮೇಲೂ ಬೇಕಿದ್ದರೆ ತನಿಖೆ ಮಾಡಲಿ' - G T Devegowda