ಹಾವೇರಿ: ದೇವಗಿರಿ ಗ್ರಾಮದ ಬಳಿ ನಿರ್ಮಾಣವಾಗಿರುವ ಬ್ರಿಡ್ಜ್ ಕಂ ಬ್ಯಾರೇಜ್ಗೆ ಬೇಕಾಬಿಟ್ಟಿಯಾಗಿ ಕ್ರಸ್ಟ್ ಗೇಟ್ಗಳನ್ನು ಅಳವಡಿಸುತ್ತಿದ್ದು, ವರದಾ ನದಿಯ ನೀರು ಪೋಲಾಗುತ್ತಿದೆ. ಮೂರು ದಿನಗಳ ಹಿಂದೆ ತುಂಬಿದ್ದ ಬ್ಯಾರೇಜ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂರೇ ದಿನಕ್ಕೆ ಖಾಲಿಯಾಗಿದ್ದು, ಹಾವೇರಿ ಮತ್ತು ಸವಣೂರು ತಾಲೂಕಿನ ವಿವಿಧ ಗ್ರಾಮಗಳ ರೈತರಲ್ಲಿ ಇದೀಗ ಆತಂಕ ಶುರುವಾಗಿದೆ. ಬ್ಯಾರೇಜ್ಗೆ ಅವೈಜ್ಞಾನಿಕವಾಗಿ ಗೇಟ್ ಅಳವಡಿಸಿದ್ದರಿಂದ ನೀರು ಖಾಲಿಯಾಗಿದೆ ಎಂದು ರೈತರು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಾ ನದಿಯ ನೀರು ನಂಬಿ, ಹಿಂಗಾರು ಬಿತ್ತನೆ ಮಾಡಿದ್ದೇವೆ. ದೇವಗಿರಿ, ಮೆಳ್ಳಾಗಟ್ಟಿ, ಮನ್ನಂಗಿ ಸೇರಿದಂತೆ ಸವಣೂರು ತಾಲೂಕಿಗೆ ಕುಡಿಯುವ ನೀರು ಒದಗಿಸುವ ಬ್ಯಾರೇಜ್ನಲ್ಲಿ ನೀರು ಖಾಲಿಯಾಗಿದೆ. ತುಕ್ಕು ಹಿಡಿದಿರುವ ಗೇಟ್ಗೆ, ಯಾವುದೇ ರಬ್ಬರ್ ಬಳಸದೆ ಗೇಟ್ ಹಾಕಿದ್ದರಿಂದ ನೀರು ಪೋಲು ಆಗಿದೆ. ನಿರಂತರವಾಗಿ ನೀರು ಪೋಲಾದರೆ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರವಾಗುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ದೇವಗಿರಿಯ ಗ್ರಾಮದ ಜನರು, ಕ್ರಸ್ಟ್ ಗೇಟ್ಗೆ ಬಣ್ಣ ಹಚ್ಚಿ ಹೊಸ ರಬ್ಬರ್ ಹಾಕಿ ಅಳವಡಿಸುವಂತೆ ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ಸಣ್ಣ ನೀರಾವರಿ ಇಲಾಖೆ ಜಂಟಿ ಇಂಜಿನಿಯರ್ ಮಂಜುನಾಥ್ ಆದಷ್ಟು ಬೇಗ ಸರಿಪಡಿಸುವುದಾಗಿ ಭರವಸೆ ನೀಡಿದ ನಂತರ ಗ್ರಾಮಸ್ಥರು ಸಮಾಧಾನಗೊಂಡರು.
ಇದನ್ನೂ ಓದಿ: ಕನಿಷ್ಠ ಬೆಂಬಲ ಬೆಲೆ ಕಾನೂನಿಗೆ ಆಗ್ರಹಿಸಿ ಡಿ.6 ರಿಂದ ಪಂಜಾಬ್ ರೈತರ ದೆಹಲಿ ಚಲೋ