ಬೆಂಗಳೂರು: ನ್ಯಾಯಾಲಯದ ಆದೇಶವಿದ್ದರೂ ತಂದೆಯ ಸುಪರ್ದಿನಲ್ಲಿದ್ದ ಆರೂವರೆ ವರ್ಷದ ಮಗುವನ್ನು ತಾಯಿ ಹಾಗೂ ಆತನ ಸ್ನೇಹಿತ ಜೊತೆಗೂಡಿ ಬಲವಂತವಾಗಿ ಕರೆದೊಯ್ದ ಘಟನೆ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 137ನಡಿ ತಾಯಿ ಅನುಪಮಾ ಹಾಗೂ ಸ್ನೇಹಿತನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಿದ್ದಾರ್ಥ್ ಹಾಗೂ ಅನುಪಮಾ 2014ರಲ್ಲಿ ಮದುವೆಯಾಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಬ್ಬರೂ ಪರಸ್ಪರ ದೂರವಾಗಿದ್ದರು. ಮಗನನ್ನು ತನ್ನ ಸುಪರ್ದಿ ತೆಗೆದುಕೊಳ್ಳುವ ವಿಚಾರವಾಗಿ ಇಬ್ಬರೂ ಕೋರ್ಟ್ ಮೊರೆ ಹೋಗಿದ್ದರು. ಈ ಕುರಿತ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮಗುವನ್ನು ಸಿದ್ದಾರ್ಥ್ ಸುಪರ್ದಿನಲ್ಲಿರಲು ಆದೇಶಿಸಿತ್ತು. ಕೊಡಿಗೆಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ವೊಂದರಲ್ಲಿ ತಂದೆಯೊಂದಿಗೆ ಸಿದ್ದಾರ್ಥ್ ನೆಲೆಸಿದ್ದನು. ಇಂದು ಬೆಳಗ್ಗೆ ಶಾಲಾ ಬಸ್ಗಾಗಿ ಮೊಮ್ಮಗನೊಂದಿಗೆ ತಾತ ಕಾಯುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಅನುಪಮಾ ಹಾಗೂ ಆಕೆಯ ಸ್ನೇಹಿತ ಏಕಾಏಕಿ ಬಲವಂತವಾಗಿ ಮಗುವನ್ನು ಕರೆದೊಯ್ದಿದ್ದಾರೆ.
ಯಾರೋ ನಮ್ಮ ಮೊಮ್ಮಗನನ್ನು ಕರೆದುಕೊಂಡು ಹೋಗಿದ್ದಾರೆ ಎಂದು ತಾತ ಆರೋಪಿಸಿದ್ದಾರೆ. ನಾನು ಮತ್ತು ನಮ್ಮ ಮೊಮ್ಮಗ ಬಸ್ಗಾಗಿ ಕಾಯುತ್ತಿದ್ದಾಗ ಯಾರೋ ನಮ್ಮ ಬಳಿ ಬಂದರು. ಬಳಿಕ ರೌಡಿಯೊಬ್ಬ ನನ್ನನ್ನು ತಳ್ಳಿ ಮೊಮ್ಮಗನನ್ನು ಕರೆದುಕೊಂಡು ಹೋಗಿದ್ದಾನೆ. ಇಲ್ಲಿ ಶಾಲಾ ಮಕ್ಕಳಿಗೆ ಸುರಕ್ಷತೆ ಇಲ್ಲ. ದಯವಿಟ್ಟು ನನ್ನ ಮೊಮ್ಮಗನನ್ನು ಕಾಪಾಡಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಈ ದೃಶ್ಯ ಅಪಾರ್ಟ್ಮೆಂಟ್ ಮುಂಭಾಗದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೆ, ಬಾಲಕನನ್ನು ಬಲವಂತವಾಗಿ ಕರೆದೊಯ್ದಿರುವ ಮೊಬೈಲ್ ವಿಡಿಯೋ ದೊರೆತಿದೆ.
ಇದನ್ನೂ ಓದಿ: ಗುಡಿಸಲಿನಲ್ಲಿ ಮಲಗಿದ್ದ 82 ವರ್ಷದ ವೃದ್ಧೆಯ ಮೇಲೆ ದಾಳಿ ಮಾಡಿ ತಿಂದು ಹಾಕಿದ ಬೀದಿ ನಾಯಿಗಳು - Stray Dogs Kills Woman