ಧಾರವಾಡ: ಜಿಪಂ ಸದಸ್ಯ ಮಾಜಿ ಸದಸ್ಯ, ದಿವಂಗತ ಯೋಗೀಶಗೌಡ ಸಹೋದರ ಗುರುನಾಥಗೌಡ ಗೌಡರ್ಗೆ ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಧಾರವಾಡ ತಾಲೂಕಿನ ಗೋವನಕೊಪ್ಪದ ಗ್ರಾಮದಲ್ಲಿರುವ ತಮ್ಮ ಮನೆಗೆ ಬಂದು ಸೋಮಾಪುರ ಗ್ರಾಮದ ಮಂಜು ಬೇಗೂರ ಎಂಬಾತ ಜೀವ ಬೆದರಿಕೆ ಹಾಕಿದ್ದಾನೆ ಎಂದು ಎಂದು ಗುರುನಾಥಗೌಡ ಗೌಡರ್ ಆರೋಪಿಸಿದ್ದಾರೆ. ಮೊಬೈಲ್ ಫೋನ್ ಮೂಲಕ ಮಧ್ಯರಾತ್ರಿ 1:40ರ ಸುಮಾರಿಗೆ ಕರೆ ಮಾಡಿ 46 ನಿಮಿಷಗಳ ಕಾಲ ಮಾತನಾಡಿ ಅವಾಚ್ಯವಾಗಿ ನಿಂದಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
''ನಾನು ಉಳವಿ ಜಾತ್ರೆಗೆ ತೆರಳಿದ್ದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಮಂಜು ಬೇಗೂರ್ ಮತ್ತೆ ನಮ್ಮ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಹೀಗಾಗಿ ಮಂಜು ಬೇಗೂರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ತಮಗೆ ರಕ್ಷಣೆ ನೀಡಬೇಕು'' ಎಂದು ಗುರುನಾಥಗೌಡ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ವೇಳೆ ಮಾತನಾಡಿದ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ''ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಸಾಕ್ಷಿ ವಿಚಾರಣೆ ಸಂದರ್ಭದಲ್ಲಿ ಕೊಲೆ ಬೆದರಿಕೆ ಕರೆ ಬಂದಿರುವುದನ್ನು ನೋಡಿದರೆ ಇದು ಪರೋಕ್ಷವಾಗಿ ದೂರುದಾರರಿಗೆ ಹಾಗೂ ಸಾಕ್ಷಿಗಳಿಗೆ ಒತ್ತಡ ಹಾಕುವ ತಂತ್ರವಾಗಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಪೊಲೀಸರು ಸಮಗ್ರ ತನಿಖೆ ನಡೆಸಬೇಕು. ಜೊತೆಗೆ ಗುರುನಾಥಗೌಡರ ಮನೆಗೆ ಒದಗಿಸಲಾಗಿದ್ದ ಭದ್ರತೆಯನ್ನು ಯಾವುದೇ ರೀತಿಯ ಮುನ್ಸೂಚನೆ ನೀಡದೆ ವಾಪಸ್ ಪಡೆಯಲಾಗಿದೆ. ಈಗಲಾದರೂ ಪೊಲೀಸ್ ಭದ್ರತೆ ನೀಡಬೇಕು'' ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಧಾರವಾಡ: ಹಣ ಪಡೆದು ಗ್ರಾಹಕರಿಗೆ ಸೈಟ್ ನೀಡದ ಡೆವಲಪರ್ಸ್ಗೆ ಗ್ರಾಹಕರ ಪರಿಹಾರ ಆಯೋಗದಿಂದ ದಂಡ