ದಾವಣಗೆರೆ: ದಾವಣಗೆರೆ ತಾಲೂಕಿನ ಮೆಳ್ಳೆಕಟ್ಟೆ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹತ್ತಕ್ಕೂ ಹೆಚ್ಚು ಬಾಲಕಿಯರಿಂದ ಇಂಗ್ಲಿಷ್ ಶಿಕ್ಷಕಿ ಶೌಚಾಲಯ ಸ್ವಚ್ಛ ಮಾಡಿಸಿದ್ದಾರೆ ಎಂದು ಗ್ರಾಮಸ್ಥರು ಮತ್ತು ಮಕ್ಕಳು ಆರೋಪಿಸಿದ್ದಾರೆ. ಈ ಬಗ್ಗೆ ಬಾಲಕಿಯರನ್ನು ಕೇಳಿದರೆ, ಸೋಮವಾರ ಶಿಕ್ಷಕಿ ಕೇವಲ ನೀರಿನಿಂದ ಶೌಚಾಲಯ ಸ್ವಚ್ಛವಾಗುವುದಿಲ್ಲ. ಅದನ್ನು ಸರಿಯಾಗಿ ತೊಳೆಯಬೇಕೆಂದು ಹೇಳಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಆರೋಪ ಹೊತ್ತ ಶಿಕ್ಷಕಿ, "ನಾನು ವಿಡಿಯೋ ಮಾಡಿ ಹರಿಬಿಟ್ಟಿಲ್ಲ. ಮಕ್ಕಳನ್ನು ಕರೆದುಕೊಂಡ ಶೌಚಾಲಯ ಸ್ವಚ್ಛಗೊಳಿಸಲು ಹೇಳಿದ್ದು ಮುಖ್ಯ ಶಿಕ್ಷಕಿ. ಅವರು ಪೊರಕೆ ಮತ್ತು ಸೋಪು ಪೌಡರ್ ತರಿಸಿದರು. ಗಾಂಧೀಜಿ ತಮ್ಮ ಶೌಚಾಲಯವನ್ನು ಅವರೇ ಸ್ವಚ್ಛಗೊಳಿಸುತ್ತಿದ್ದರು ಎಂದು ಮಕ್ಕಳಿಗೆ ಹೇಳಿದ್ದಾರೆ. ಮಕ್ಕಳಿಂದ ಶೌಚ ಸ್ವಚ್ಛಗೊಳಿಸಬಾರದು ಎಂಬ ಆದೇಶವಿದೆ ಎಂದು ನಾನು ಹೇಳಿದರೆ, ಹಿಂದಿನ ಆದೇಶ ಬದಲಾಗಿದೆ ಎಂದು ಹೇಳಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಲು ನನಗೆ ತಿಳಿಸಿದರು" ಎಂದರು.
ಮುಖ್ಯ ಶಿಕ್ಷಕಿ ಪ್ರತಿಕ್ರಿಯಿಸಿ, "ಇಂಗ್ಲಿಷ್ ಶಿಕ್ಷಕಿ ಶಾಲೆಗೆ ಸಮಯಕ್ಕೆ ಬಾರದೇ ಇರುವುದು, ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದರಲ್ಲಿ ಲೋಪ, ಶಾಲೆಯ ಸಮಯದಲ್ಲಿ ಮೊಬೈಲ್ ಬಳಕೆ ಈ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ನೋಟಿಸ್ ಕೊಟ್ಟಿದ್ದೆವು. ಆ ನೋಟಿಸ್ಗೆ ಇಂದು ಅವರು ಉತ್ತರ ಕೊಡಬೇಕಿತ್ತು. ಆದರೆ ಅವರು ಈ ರೀತಿ ಮಾಡಿದ್ದಾರೆ" ಎಂದು ತಿಳಿಸಿದರು.
ಘಟನೆ ತಿಳಿದು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಿಕ್ಷಣಾಧಿಕಾರಿ ಶೇರ್ ಅಲಿ, "ಘಟನೆ ಬೆಳಕಿಗೆ ಬಂದ ತಕ್ಷಣ ಶಾಲೆಗೆ ಭೇಟಿ ನೀಡಿದ್ದೇವೆ. ಪ್ರತ್ಯೇಕವಾಗಿ ಶಾಲಾ ಶಿಕ್ಷಕರ, ಮಕ್ಕಳ ಹಾಗೂ ಗ್ರಾಮಸ್ಥರ ಹೇಳಿಕೆ ಪಡೆದುಕೊಳ್ಳಲಾಗಿದೆ. ವರದಿ ಸಿದ್ಧಪಡಿಸಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ. ಮೇಲಾಧಿಕಾರಿಗಳ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಘಟನೆ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮುಖ್ಯ ಶಿಕ್ಷಕಿ ವಿರುದ್ಧ ವಿದ್ಯಾರ್ಥಿಗಳಿಂದ ಮನೆಯ ಶೌಚಾಲಯ ಸ್ವಚ್ಛತೆ ಮಾಡಿಸಿದ ಆರೋಪ: ಪ್ರಕರಣ ದಾಖಲು